ಕಳೆದ ಬಾರಿಯ ಎಡವಟ್ಟು ತಪ್ಪಿಸಲು ಸಿಇಟಿ ಪಠ್ಯಕ್ರಮ ಪ್ರಕಟಿಸಿದ ಕೆಇಎ

kea
Published on

ಬೆಂಗಳೂರು: ಕಳೆದ ವರ್ಷದ ರೀತಿಯಲ್ಲಿ ಅವಾಂತರಗಳು ಸೃಷ್ಟಿಯಾಗುವುದನ್ನು ತಪ್ಪಿಸುವುದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ-2025)ಗೆ ಪಠ್ಯಕ್ರಮವನ್ನು ಪ್ರಕಟಿಸಿದೆ.

ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಭೌತಶಾಸ, ರಾಸಾಯನಶಾಸ, ಗಣಿತ ಮತ್ತು ಜೀವವಿಜ್ಞಾನ ವಿಷಯಗಳ ಪಠ್ಯಕ್ರಮವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಅದನ್ನು ನೋಡಿಕೊಂಡೇ ಪರೀಕ್ಷೆಗೆ ತಯಾರಿ ನಡೆಸಿಕೊಳ್ಳಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಎನ್‌ಸಿಇಆರ್‌ಟಿ ಪಠ್ಯಕ್ರಮ ಹಾಗೂ ಶಾಲಾ ಶಿಕ್ಷಣ (ಪಿಯು) ಇಲಾಖೆ ಪ್ರಕಟಿಸಿರುವ ಪಠ್ಯ ಪುಸ್ತಕಗಳನ್ನು ಆಧಾರವಾಗಿ ಇಟ್ಟುಕೊಂಡೇ ಈ ಪಠ್ಯಕ್ರಮ ರಚಿಸಲಾಗಿದೆ. ಇದನ್ನು ಪಿಯು ಕಾಲೇಜುಗಳ ವಿಷಯ ತಜ್ಞರಿಂದಲೂ ಪರಿಶೀಲನೆ ಮಾಡಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಕಳೆದ ವರ್ಷದ ನಡೆದಿದ್ದ ಅವಾಂತರ:

ಸಿಇಟಿ-2024ರಲ್ಲಿ ಪಠ್ಯಕ್ರಮ ಪ್ರಕಟಿಸದ ಕಾರಣ ಪಠ್ಯಕ್ರಮ ಹೊರತಾದ 60 ಪ್ರಶ್ನೆಗಳಿವೆ ಎಂದು ಖಾಸಗಿ ಶಾಲೆಗಳು ಆರೋಪ ಮಾಡಿದ್ದವು. ಸಮಸ್ಯೆ ಬಿಗಡಾಯಿಸುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ವಿಷಯವಾರು 4 ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿತ್ತು.

ಸಮಿತಿಯು ಪಠ್ಯಕ್ರಮ ಹೊರತಾದ 50 ಪ್ರಶ್ನೆಗಳಿವೆ. ಈ ಪ್ರಶ್ನೆಗಳನ್ನು ಕೈಬಿಟ್ಟು ಮೌಲ್ಯಮಾಪನ ಮಾಡಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮರು ಪರೀಕ್ಷೆ ಮಾಡಬಾರದು ಮತ್ತು ತಪ್ಪಾದ 2 ಪ್ರಶ್ನೆಗಳಿಗೆ ಕೃಪಾಂಕ ನೀಡಬೇಕು ಎಂದು ತಜ್ಞರ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಆ ಪ್ರಕಾರವಾಗಿ ಭೌತಶಾಸ-9, ರಾಸಾಯನಾಸ-15, ಗಣಿತ-15, ಜೀವಶಾಸ-11 ಅಂಕದ ಪ್ರಶ್ನೆಗಳನ್ನು ಹೊರಗಿಟ್ಟು ಮೌಲ್ಯಮಾಪನ ಮಾಡಲಾಗಿತ್ತು. ಇದರ ಜತೆಗೆ ಭೌತಶಾಸ ಮತ್ತು ಗಣಿತದಲ್ಲಿ ತಲಾ ಒಂದು ಕೃಪಾಂಕ ನೀಡಲಾಗಿತ್ತು. 3.49 ಲಕ್ಷ ವಿದ್ಯಾರ್ಥಿಗಳು ಸಿಇಟಿ ಬರೆದಿದ್ದರು.

ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಡುವಿನ ಸಮನ್ವಯ ಕೊರತೆಯಿಂದ ಸಾಕಷ್ಟು ಸಮಸ್ಯೆಗಳು ಉದ್ಭವಿಸಿದ್ದವು. ಈ ಪ್ರಕರಣದಿಂದ ಪಾಠ ಕಲಿತಿರುವ ಕೆಇಎ, ಈ ಬಾರಿ ಮೊದಲೇ ಪಠ್ಯಕ್ರವಮನ್ನು ಪ್ರಕಡಿಸಿದೆ. ಈ ಪಠ್ಯಕ್ರಮದಲ್ಲಿಯೇ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂಬ ಸೂಚನೆಯನ್ನೂ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net