ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರನ್ನು ಅಮಾನತಿನಲ್ಲಿಟ್ಟು ಸಿಇಟಿ ಪರಿಹಾರ ಕಲ್ಪಿಸಿ

ABVP
Published on

ಬೆಂಗಳೂರು ಸಿಇಟಿ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿರುವ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರನ್ನು ಅಮಾನತಿನಲ್ಲಿಟ್ಟು ಮುಂದಿನ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಖಿಲ ಭಾರತೀಯಲ ವಿದ್ಯಾರ್ಥಿ ಪರಿಷತ್ತು (ಎಬಿವಿಪಿ) ಸೇರಿ ವಿವಿಧ ಸಂಘಟನೆಗಳು ಆಗ್ರಹಿಸಿದೆ.

ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮಲ್ಲೇಶ್ವರದಲ್ಲಿರುವ ಸೌಹಾರ್ದ ಸಹಕಾರಿ ಸೌಧದಲ್ಲಿ ಮಂಗಳವಾರ ನಡೆಸಿದ ಸಮಾಲೋಚನಾ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ನ್ಯಾಯ ದೊರೆಯಬೇಕಾದಲ್ಲಿ ಸರ್ಕಾರವು ರಮ್ಯಾ ಅವರನ್ನು ಹೊರಗಿಟ್ಟು ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವಿಷಯ ತಜ್ಞರ ಸಮಿತಿಯು ಕೆಇಎ ವ್ಯಾಪ್ತಿಯೊಳಗಿರುವುದರಿಂದ ಸಮಿತಿಯು ಪಾರದರ್ಶಕವಾಗಿ ತನಿಖೆ ನಡೆಸಲು ಸಾಧ್ಯವೇ ಎಂಬುವುದು ರಾಜ್ಯದ ಜನತೆಯ ಪ್ರಶ್ನೆಯಾಗಿದೆ. ತಜ್ಞರ ಹೆಸರನ್ನು ಗೌಪ್ಯವಾಗಿ ಇಟ್ಟಿರುವುದರಿಂದ ಹಿಂದಿನ ಮರ್ಮವೇನು ಎಂದು ಪ್ರಶ್ನಿಸಿದರು.

ಶೇ.25 ಪಠ್ಯಕ್ರಮ ಹೊರತಾದ ಪ್ರಶ್ನೆಗಳನ್ನು ನೀಡುವುದರ ಹಿಂದೆ ಯಾವುದೋ ಮಾಫಿಯಾದ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಸಭೆಯು ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು.

ಸಭೆಯಲ್ಲಿ ಎಬಿವಿಪಿ ಪ್ರಾಂತ ಕಾರ್ಯದರ್ಶಿ ಪ್ರವೀಣ್ ಎಚ್.ಕೆ., ಕುಪ್ಮಾ ಕಾರ್ಯದರ್ಶಿ ನರೇಂದ್ರ ನಾಯಕ್, ಪಾಲಕರ ಸಂಘಟನೆ ಅಧ್ಯಕ್ಷ ಬಿ.ಎನ್. ಯೋಗಾನಂದ, ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ಹನುಮಂತ ನಿರಾಣಿ, ಶಶೀಲ್ ನಮೋಶಿ ಹಾಗೂ ಮಾಜಿ ಎಂಎಲ್‌ಸಿ ಅರುಣ್ ಶಹಾಪುರ ಸೇರಿ ಹಲವರು ಪಾಲ್ಗೊಂಡಿದ್ದರು.

ಪ್ರಧಾನ ಕಾರ್ಯದರ್ಶಿ ಭೇಟಿ ಮಾಡಿದ ನಿಯೋಗ

ಎಬಿವಿಪಿ ಪ್ರಾಂತ ಕಾರ್ಯದರ್ಶಿ ಪ್ರವೀಣ್ ಎಚ್.ಕೆ. ನೇತೃತ್ವದ ನಿಯೋಗವು ಸಮಾಲೋಚನಾ ಸಬೆಯ ನಿರ್ಣಯವನ್ನು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಕರ್ ಎಂ.ಎಸ್. ಅವರಿಗೆ ಸಲ್ಲಿಸಿ ಚರ್ಚಿಸಿತು.

ಸಮಸ್ಯೆ ಕುರಿತು ಸ್ಪಂದಿಸಿದ ಪ್ರಧಾನ ಕಾರ್ಯದರ್ಶಿ ಅವರು, ಈಗಾಗಲೇ ಸಮಿತಿ ರಚಿಸಲಾಗಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಲಾಗುವುದು ಎಂಬ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net