

ಹೈದರಾಬಾದ್: ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ತಮ್ಮ ಪುತ್ರಿ, ಎಂಎಲ್ಸಿ ಕೆ. ಕವಿತಾ ಅವರನ್ನು ಜಾರಿ ನಿರ್ದೇಶನಾಲಯದ ಉರುಳಿನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಅದಕ್ಕಾಗಿ ಬಿಆರ್ಎಸ್ ಶಾಸಕರಿಗೆ ಆಮಿಷ ಒಡ್ಡಿದ್ದ ಪ್ರಕರಣವನ್ನು ಅಸ್ತ್ರವಾಗಿ ಬಳಸಿ ಬಿಜೆಪಿಯಿಂದ ಪ್ರಯೋಜನ ಪಡೆಯಲು ಕೆಸಿಆರ್ ಯತ್ನಿಸಿದ್ದೂ ಕೂಡ ಬಹಿರಂಗಗೊಂಡಿದೆ. ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಮಾಜಿ ಪೊಲೀಸ್ ಅಧಿಕಾರಿಯೊಬ್ಬರ ತಪ್ಪೊಪ್ಪಿಗೆಯಿಂದ ಈ ಎಲ್ಲ ಸಂಗತಿಗಳು ಬೆಳಕಿಗೆ ಬಂದಿವೆ.
ಮಾಜಿ ಉಪ ಪೊಲೀಸ್ ಆಯುಕ್ತ ಪಿ.ರಾಧಾಕಿಶನ್ ರಾವ್ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಈ ಎಲ್ಲ ಮಾಹಿತಿಗಳನ್ನು ಉಲ್ಲೇಖಿಸಿದ್ದಾರೆ. ಬಿಆರ್ಎಸ್ ಶಾಸಕರ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಬಂಧಿಸಲು ಕೆಸಿಆರ್ ಪ್ರಯತ್ನಿಸಿದ್ದರು ಎಂಬುದು ತಪ್ಪೊಪ್ಪಿಗೆಯಲ್ಲಿ ಉಲ್ಲೇಖಿಸಲಾಗಿದೆ. ‘ಹಿರಿಯರು’ ಎಂದು ಕೆಸಿಆರ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಅವರು ಈ ಮಾಹಿತಿ ತಿಳಿಸಿದ್ದಾರೆ.
ಅಂದುಕೊಂಡಂತೆ ನಡೆಯದ ಯೋಜನೆ: ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಿದ್ದ ಕೆಸಿಆರ್, ಪ್ರಕರಣವನ್ನು ಕಠಿಣವಾಗಿಸುವ ಸಲುವಾಗಿ ಸಂತೋಷ್ ಅವರನ್ನು ಬಂಧಿಸಲು ಯತ್ನಿಸಿದ್ದರು. ಆ ಮೂಲಕ ಬಿಜೆಪಿಯಿಂದ ಪ್ರಯೋಜನ ಪಡೆಯಲು ಯೋಜಿಸಿದ್ದರು. ಕೇಸ್ ಬಿಗಿಯಾದಾಗ ಬಿಜೆಪಿ ರಾಜಿಗೆ ಬರುತ್ತದೆ. ಆಗ ಅದಕ್ಕೆ ಪ್ರತಿಯಾಗಿ ಪುತ್ರಿಯನ್ನು ಇ.ಡಿ. ಪ್ರಕರಣದಿಂದ ಪಾರಾಗಿಸಬಹುದು ಎಂಬ ಉಪಾಯ ಕೆಸಿಆರ್ ಅವರದ್ದಾಗಿತ್ತು. ಆದರೆ ಕೆಲವು ಅಧಿಕಾರಿಗಳ ಸಮರ್ಥತೆಯಿಂದಾಗಿ ಸಂತೋಷ್ ಬಂಧನ ತಪ್ಪಿಹೋಗಿದ್ದು, ಬಳಿಕ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಆಗ ಬಂಧಿಸದಂತೆ ಹೈಕೋರ್ಟ್ ಆದೇಶಿಸಿತ್ತು. ನಂತರ ಪ್ರಕರಣ ಎಸ್ಐಟಿಯಿಂದ ಸಿಬಿಐಗೆ ಹಸ್ತಾಂತರವಾಯಿತು. ಯೋಜಿಸಿದಂತೆ ಕೆಲಸ ಆಗದ್ದಕ್ಕೆ ಕೆಸಿಆರ್ ಭಾರಿ ಸಿಟ್ಟಾಗಿದ್ದರು ಎಂಬುದು ತಪ್ಪೊಪ್ಪಿಗೆ ಹೇಳಿಕೆಯಿಂದ ಬಹಿರಂಗಗೊಂಡಿದೆ.
ವ್ಯವಸ್ಥಿತ ಸಂಚು: ಹಿಂದಿನ ಬಿಆರ್ಎಸ್ ನೇತೃತ್ವದ ಸರ್ಕಾರದಲ್ಲಿ ಫೋನ್ ಟ್ಯಾಪಿಂಗ್, ಕೆಲವು ಕಂಪ್ಯೂಟರ್ ಸಿಸ್ಟಮ್ಳು ಮತ್ತು ಕಚೇರಿ ಡೇಟಾಗಳನ್ನು ನಾಶಪಡಿಸಿದ್ದ ಪ್ರಕರಣದಲ್ಲಿ ಈ ವರ್ಷ ಮಾರ್ಚ್ನಲ್ಲಿ ರಾಧಾಕಿಶನ್ ರಾವ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ಕೆಲವರ ಆಜ್ಞೆಯ ಮೇರೆಗೆ ರಾಜಕೀಯ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸ್ಪೆಷಲ್ ಇನ್ವೆಸ್ಟಿಗೇಷನ್ ಬ್ಯೂರೋ(ಎಸ್ಐಬಿ)ದಿಂದ ಅಮಾನತಾದ ಡಿಎಸ್ಪಿ ಡಿ.ಪ್ರಣೀತ್ ಕುಮಾರ್ (ಪ್ರಣೀತ್ ರಾವ್) ಮತ್ತಿತರ ಕೆಲವು ಅಧಿಕಾರಿಗಳೊಂದಿಗೆ ಶಾಮೀಲಾಗಿ ಖಾಸಗಿ ವ್ಯಕ್ತಿಗಳ ವಿವರವನ್ನು ಅನಧಿಕೃತವಾಗಿ ಸಂಗ್ರಹಿಸಿದ್ದ ಆರೋಪ ರಾಧಾಕಿಶನ್ ರಾವ್ ಮೇಲಿದೆ. ಕೆಸಿಆರ್ ಮತ್ತು ಅವರ ಕುಟುಂಬದವರ ಸಿವಿಲ್ ವ್ಯಾಜ್ಯಗಳ ಇತ್ಯರ್ಥ, ಬಿಆರ್ಎಸ್ ಮತ್ತು ಕೆಸಿಆರ್ ಹಾಗೂ ಅವರ ಕುಟುಂಬದವರಿಗೆ ತೊಂದರೆ ಕೊಡುವವರ ಕೈಕಟ್ಟಿ ಹಾಕುವಂಥ ಎಲ್ಲ ಮುಖ್ಯ ಗೌಪ್ಯ ಕೆಲಸಗಳನ್ನು ತಾವು ನಿಭಾಯಿಸುತ್ತಿದ್ದುದಾಗಿ ರಾಧಾಕಿಶನ್ ರಾವ್ ಹೇಳಿಕೊಂಡಿದ್ದಾರೆ.
ಎಸ್ಐಬಿ ಮೂಲಕ ನಿಗಾ: ಕೆಸಿಆರ್ ಮತ್ತು ಬಿಆರ್ಎಸ್ಗೆ ತೊಂದರೆ ನೀಡುತ್ತಿದ್ದ ವಿರೋಧಪಕ್ಷಗಳ ನಾಯಕರು ಮತ್ತವರ ಸಹವರ್ತಿಗಳ ಮೇಲೆ ನಿಗಾ ಇಡುವ ಕೆಲಸವನ್ನು ಎಸ್ಐಬಿ ಮುಖ್ಯಸ್ಥ ಪ್ರಭಾಕರ್ ರಾವ್ ಅವರು ಪ್ರಣೀತ್ ರಾವ್ ಉಸ್ತುವಾರಿಯ ತಂಡದ ಮೂಲಕ ಮಾಡುತ್ತಿದ್ದರು ಎಂದು ರಾಧಾಕಿಶನ್ ಮಾಹಿತಿ ನೀಡಿದ್ದಾರೆ. ವಿಪಕ್ಷಗಳಿಗೆ ಸಂಬಂಧಿತ ಹಣ ವಶ, ಬಿಆರ್ಎಸ್ಗೆ ದೇಣಿಗೆದಾರರಿಂದ ಬರುವ ಹಣ ಸಾಗಾಟಕ್ಕೆ ನೆರವು ಹಾಗೂ ಕೆಸಿಆರ್-ಬಿಆರ್ಎಸ್ಗೆ ಸಂಬಂಧಿತ ಇತರ ಗೌಪ್ಯ ಮಾಹಿತಿಯ ಕೆಲಸಗಳಿಗೆ ಪ್ರಣೀತ್ ರಾವ್ ಜತೆ ಸಹಕರಿಸುವಂತೆ ಪ್ರಭಾಕರ್ ರಾವ್ ಹೇಳಿದ್ದರು ಎಂಬುದಾಗಿಯೂ ರಾಧಾಕಿಶನ್ ಹೇಳಿಕೊಂಡಿದ್ದಾರೆ. ಇಂಥ ಚಟುವಟಿಕೆ 2018ರಲ್ಲಿ ಆರಂಭವಾಗಿದ್ದು, 2019ರ ಲೋಕಸಭಾ ಚುನಾವಣೆ ಹಾಗೂ ಇತರ ಕೆಲವು ಉಪ ಚುನಾವಣೆಗಳ ಸಂದರ್ಭದವರೆಗೂ ಮುಂದುವರಿದಿತ್ತು ಎಂದೂ ರಾವ್ ತಿಳಿಸಿದ್ದಾರೆ. ವಿಪಕ್ಷಗಳ ನಾಯಕರು, ಅವರ ಬೆಂಬಲಿಗರು, ಕುಟುಂಬ ಸದಸ್ಯರು, ಬಿಆರ್ಎಸ್ ಪಕ್ಷದೊಳಗಿನ ಸಂಶಯಾಸ್ಪದ ವ್ಯಕ್ತಿಗಳು, ಕೆಸಿಆರ್-ಬಿಆರ್ಎಸ್ ವಿರುದ್ಧ ಟೀಕಿಸುತ್ತ ವಿಪಕ್ಷಗಳಿಗೆ ಹತ್ತಿರವಾಗಲು ಬಯಸುತ್ತಿದ್ದ ವ್ಯಕ್ತಿಗಳ ಪ್ರೊಫೈಲ್ ರಚಿಸಿಕೊಡುವಂತೆ ಪ್ರಣೀತ್ ರಾವ್ಗೆ ಪ್ರಭಾಕರ್ ರಾವ್ ಸೂಚಿಸುತ್ತಿದ್ದರು. ಅದರಂತೆ ಪ್ರಣೀತ್ ರಾವ್ ಫೋನ್ ಟ್ಯಾಪಿಂಗ್ ಇತ್ಯಾದಿ ನಡೆಸಿ ಮಾಹಿತಿ ಸಂಗ್ರಹಿಸಿ ಕೊಡುತ್ತಿದ್ದರು. ಅದನ್ನಾಧರಿಸಿ ಕೆಸಿಆರ್ ಮುಂದಿನ ಕ್ರಮ ಕೈಗೊಳ್ಳುತ್ತಿದ್ದರು ಎಂಬುವುದು ಕೂಡ ತಪ್ಪೊಪ್ಪಿಗೆಯಲ್ಲಿದೆ.
ಪ್ರತಿಷ್ಠೆಯಾಗಿ ಪರಿಗಣಿಸಿದ್ದ ಕೆಸಿಆರ್: ಮೊಯಿನಾಬಾದ್ ಫಾಮ್ರ್ ಹೌಸ್ನಲ್ಲಿ 2022ರ ಅಕ್ಟೋಬರ್ನಲ್ಲಿ ಶಾಸಕರ ಕಳ್ಳಬೇಟೆ ಪ್ರಕರಣ ಸಂಬಂಧ ಮಾಹಿತಿ ಕಲೆಹಾಕಿದ್ದು ಈ ತಂಡ ನಡೆಸಿದ್ದ ಬಹುಮುಖ್ಯ ಕೆಲಸವಾಗಿತ್ತು. ಮುನುಗೋಡ್ ಕ್ಷೇತ್ರದ ಉಪ ಚುನಾವಣೆ ಸಂದರ್ಭ ಕಾಂಗ್ರೆಸ್ ಶಾಸಕ ಕೆ.ರಾಜಗೋಪಾಲ ರೆಡ್ಡಿ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರು. ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಕೆಸಿಆರ್, ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಪಣತೊಟ್ಟಿದ್ದರು. ಆಗ ಬಿಆರ್ಎಸ್ ಶಾಸಕ ಪೈಲಟ್ ರೋಹಿತ್ ರೆಡ್ಡಿ ಜತೆ ಬಿಜೆಪಿಯ ಪ್ರಭಾವಿ ವ್ಯಕ್ತಿ ಸಂಪರ್ಕದಲ್ಲಿದ್ದು, ಪಕ್ಷವನ್ನು ತೊರೆದು ಒಂದಷ್ಟು ಶಾಸಕರೊಂದಿಗೆ ಬಿಜೆಪಿಗೆ ಸೇರಲು ಆಮಿಷವೊಡ್ಡಿದ್ದಾರೆ ಎಂಬ ಮಾಹಿತಿಯನ್ನು ಕೆಸಿಆರ್ಗೆ ಪ್ರಭಾಕರ್ ರಾವ್ ನೀಡಿದ್ದರು. ಆಗ ಇದನ್ನು ಬಿಜೆಪಿ ವಿರುದ್ಧ ಅಸ್ತ್ರವಾಗಿ ಬಳಸಲು ಕೆಸಿಆರ್ ಯೋಜನೆ ಹಾಕಿದ್ದರು.