

ಬೆಂಗಳೂರು: ಕನ್ನಡ ಚಲನಚಿತ್ರ ಕಪ್ (ಕೆಸಿಸಿ)- 2023 ಟೂರ್ನಿಯಲ್ಲಿ ಡಾರ್ಲಿಂಗ್ ಕೃಷ್ಣ ನೇತೃತ್ವದ ಹಾಗೂ ಟೀಮ್ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾರನ್ನು ಒಳಗೊಂಡ ಗಂಗಾ ವಾರಿಯರ್ಸ್ ತಂಡ ಅದ್ಭುತ ಗೆಲುವಿನೊಂದಿಗೆ ಟ್ರೋಫಿ ಮುಡಿಗೇರಿಸಿಕೊಂಡಿದೆ.
ನಿನ್ನೆ (ಫೆ.25) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವಿಜಯನಗರ ಪ್ಯಾಟ್ರಿಯಾಟ್ಸ್ ವಿರುದ್ಧ ಗಂಗಾ ವಾರಿಯರ್ಸ್ ಗೆಲುವು ಸಾಧಿಸಿತು. ತಂಡದ ಗೆಲುವಿನಲ್ಲಿ ಸುರೇಶ್ ರೈನಾ ಪ್ರಮುಖ ಪಾತ್ರ ವಹಿಸಿದರು. ಕೇವಲ 29 ಎಸೆತದಲ್ಲಿ ಅಜೇಯ 54 ರನ್ ಬಾರಿಸಿದರು. ಬೌಲಿಂಗ್ನಲ್ಲೂ ಚಮತ್ಕಾರ ತೋರಿ 2 ವಿಕೆಟ್ ಪಡೆದರು. ಅಲ್ಲದೆ, ಒಂದು ರನೌಟ್ ಸಹ ಮಾಡುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಪಂದ್ಯ ಗೆದ್ದ ಬಳಿಕ ಖುಷಿ ವ್ಯಕ್ತಪಡಿಸಿರುವ ಸುರೇಶ್ ರೈನಾ, ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ್ದು ಅದ್ಭುತ ಅನುಭವ. ಅನೇಕ ನೆನಪುಗಳನ್ನು ಮತ್ತೆ ಹೊತ್ತು ತಂದಿತು. ಕೆಸಿಸಿಗೆ ಧನ್ಯವಾದಗಳು. ಟೂರ್ನಿಯನ್ನು ಚೆನ್ನಾಗಿ ಆಯೋಜನೆ ಮಾಡಿದ್ದ ಸಹೋದರ ಕಿಚ್ಚ ಸುದೀಪ್ಗೂ ಧನ್ಯವಾದಗಳು ಮತ್ತು ಮುಂದಿನ ಸೀಸನ್ಗೆ ಎದುರು ನೋಡುತ್ತಿದ್ದೇನೆ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಕಿಚ್ಚ ಸುದೀಪ್ ಅವರು ಸ್ಯಾಂಡಲ್‌ವುಡ್ ತಾರೆಯರು ಮತ್ತು ಅಂತರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರರನ್ನು ಕರೆತರುವ ಮೂಲಕ 2 ದಿನಗಳ ಟಿ10 ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ ಎಂಬುದನ್ನು ನಾವಿಲ್ಲಿ ಗಮನಿಸಬೇಕಿದೆ. (ಏಜೆನ್ಸೀಸ್)