ಕಾವೇರಿ 5ನೇ ಹಂತ ಶೀಘ್ರ ಅನುಷ್ಠಾನ: ರಾಜ್ಯಪಾಲ ವಿ.ಆರ್​.ವಾಲಾ ಭರವಸೆ

VR Vaala 18 Feb 20
Published on

ಬೆಂಗಳೂರು: ಕಾವೇರಿ ನೀರು ಸರಬರಾಜು ಯೋಜನೆ 5ನೇ ಹಂತವನ್ನು ಜೈಕಾ ನೆರವಿನೊಂದಿಗೆ ಶೀಘ್ರ ಅನುಷ್ಠಾನಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ರಾಜ್ಯಪಾಲ ವಿ.ಆರ್. ವಾಲಾ ಹೇಳಿದರು.

ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಅವರು, ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ಬೆಂಗಳೂರು ನಗರಕ್ಕೆ ಸರಬರಾಜು ಮಾಡಲು ಹೆಚ್ಚುವರಿಯಾಗಿ 775 ಎಂಎಲ್​ಡಿ ನೀರು ಲಭ್ಯವಾಗಲಿದೆ ಎಂದರು.

ಅಪರಾಧಿಗಳು ಮತ್ತು ಭಯೋತ್ಪಾದಕ ರನ್ನು ಬಂಧಿಸಲು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಹೆಚ್ಚಿನ ಭದ್ರತೆ ಇರುವ ಕಾರಾಗೃಹವನ್ನು ನಿರ್ಮಾಣ ಮಾಡಲಾಗುತ್ತದೆ. ವಿಜಯಪುರ ಮತ್ತು ಬೀದರ್​ನಲ್ಲೂ ಕೇಂದ್ರ ಕಾರಾಗೃಹಗಳನ್ನು ನಿರ್ವಿುಸಲು ಸರ್ಕಾರ ಮುಂದಾಗಿದೆ ಎಂದರು.

ಬೆಂಗಳೂರು ನಗರ ಪೊಲೀಸರು ನಾಗರಿಕಸ್ನೇಹಿ ಭಾಗವಾಗಿ ಪಾಸ್​ಪೋರ್ಟ್ ಪರಿಶೀಲನೆಗೆ ಮೊಬೈಲ್ ಅಪ್ಲಿಕೇಷನ್ ಬಳಸುತ್ತಿದ್ದು, ಇದನ್ನು ರಾಜ್ಯದ 812 ಪೊಲೀಸ್ ಠಾಣೆಗಳಿಗೆ ವಿಸ್ತರಿಸಲಾಗಿದೆ ಎಂದು ರಾಜ್ಯಪಾಲರು ಹೇಳಿದರು.

ಹೆಚ್ಚುತ್ತಿರುವ ಸೈಬರ್ ಆರ್ಥಿಕ ಮತ್ತು ಮಾದಕವಸ್ತುಗಳ ಅಪರಾಧಗಳ ಸೂಕ್ತ ತನಿಖೆ ನಡೆಸಲು ಬೆಂಗಳೂರಿನಲ್ಲಿ 8 ಕಡೆ ಸೈಬರ್ ಕ್ರೖೆಂ ಆರ್ಥಿಕ ಮತ್ತು ಮಾದಕದ್ರವ್ಯ ಸಂಬಂಧಿತ ಠಾಣೆಗಳನ್ನು ಪ್ರಾರಂಭಿಸಲಾಗುವುದು ಎಂದರು.

ನಗರಕ್ಕೆ ಪ್ರತ್ಯೇಕವಾಗಿ ಭಯೋತ್ಪಾದಕ ನಿಗ್ರಹ ಘಟಕ ಸ್ಥಾಪನೆ ಮಾಡಲಾಗಿದೆ. ತುರ್ತು ಸಂದರ್ಭ ಗಳಲ್ಲಿ ನೆರವು ನೀಡುವುದಕ್ಕಾಗಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ತುರ್ತು ಸ್ಪಂದನಾ ಬೆಂಬಲ ವ್ಯವಸ್ಥೆ ಸ್ಥಾಪಿಸಲಾಗಿದೆ ಎಂದರು.

2019-20ನೇ ಸಾಲಿನಲ್ಲಿ ಅಗ್ನಿಶಾಮಕ ಪಡೆ 4 ಸಾವಿರ ಕೋಟಿಗೂ ಮೀರಿದ ಆಸ್ತಿಯನ್ನು ಸಂರಕ್ಷಣೆ ಮಾಡಿದೆ. ಜತೆಗೆ ಸಾವಿರಾರು ಮಾನವ ಜೀವಗಳನ್ನು ರಕ್ಷಿಸಿದೆ ಎಂದು ವಿ.ಆರ್. ವಾಲಾ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net