

ಬೆಂಗಳೂರು: ಕಾವೇರಿ ಜಲ ವಿವಾದವನ್ನು ಪ್ರಧಾನಿ ಅಂಗಳಕ್ಕೆ ಎಳೆಯುವ ರಾಜ್ಯ ಸರ್ಕಾರದ ಆಶಯವನ್ನು ಸಂಸದ ಪ್ರತಾಪ್ ಸಿಂಹ ಆಕ್ಷೇಪಿಸಿದ್ದಾರೆ.
ಐಎನ್‌ಡಿಐಎ ಎಂದು ಒಕ್ಕೂಟ ಮಾಡಿಕೊಂಡು ಮೂರು ಮೂರು ಸಭೆ ಮಾಡುತ್ತಾರೆ. ಬೆಂಗಳೂರಲ್ಲೂ ಸಭೆ ಮಾಡುತ್ತಾರೆ. ತಮಿಳುನಾಡಿನ ಸಿಎಂ ಸ್ಟಾಲಿನ್‌ಗೆ ಕರೆ ಮಾಡಲಿ ಎಂದು ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸವಾಲು ಹಾಕಿದರು.
ಸರ್ವಪಕ್ಷ ಸಭೆಗೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಇದರಲ್ಲ್ಲಿ ಪ್ರಧಾನಿಯವರನ್ನು ಎಳೆಯೋದು ಬೇಡ. ತಮಿಳುನಾಡಿನವರು ಸುಪ್ರೀಂಕೋರ್ಟ್ ಮೂಲಕವೇ ನ್ಯಾಯ ಕೇಳುತ್ತಿದ್ದಾರೆ. ಹಾಗೆ ನಾವು ನಮ್ಮ ವಾದವನ್ನ ಬಲವಾಗಿ ಮಂಡಿಸಿ ನ್ಯಾಯವನ್ನ ಪಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಾವೇರಿ ನೀರಿನ ಸಮಸ್ಯೆ ಎರಡು ರಾಜ್ಯಗಳ ಮಧ್ಯೆ ಇರುವುದು ಅಲ್ಲವೇ, ಇದು ಅಂತರಾಜ್ಯ ಜಲ ವಿವಾದ. ಇದನ್ನು ಕಾವೇರಿ ನೀರು ನಿರ್ವಹಣಾ ಮಂಡಳಿ ಮೂಲಕವೇ ತೀರ್ಮಾನ ಮಾಡಿಕೊಳ್ಳಬೇಕು. ಸುಪ್ರೀಂಕೋರ್ಟ್ ತೀರ್ಮಾನ ಕೊಡುತಂಹದು. ಕೇಂದ್ರ ಸರ್ಕಾರದ ಪ್ರತಿನಿಧಿಗಳಾಗಿ ರಾಜ್ಯದ ಹಿತಸಕ್ತಿ ಕಾಪಾಡಲು ನಾವು ಬದ್ಧರಾಗಿದ್ದೇವೆ ಎಂದರು.
ನಮ್ಮ ರೈತರ ಹಿತ ಮುಖ್ಯ. ನೀರು ಬಿಡಬೇಕೆಂಬ ನಿರ್ವಹಣಾ ಮಂಡಳಿಯ ತೀರ್ಮಾನಕ್ಕೆ ನಮ್ಮ ವಿರೋಧವಿದೆ. ಎಷ್ಟೋ ಕಡೆ ನಾಟಿ ಕೆಲಸವೇ ಆಗಿಲ್ಲ. ಮಳೆ ಬರುವ ಲಕ್ಷಣವೂ ಕಾಣಿಸುತ್ತಿಲ್ಲ. ಇದರಲ್ಲಿ ರಾಜಕೀಯ ಬೇಡ. ಕರ್ನಾಟಕ ಹಿತರಕ್ಷಣೆ ವಿಚಾರಕ್ಕೆ ಬಂದರೆ ನಾವು ಜತೆಗೆ ಇದ್ದೀವಿ ಎಂದು ಸ್ಪಷ್ಟಪಡಿಸಿದರು.