ಕಾವೇರಿ; ಸುಪ್ರಿಂಗೆ ಅರ್ಜಿ, ಬುಧವಾರ ಸರ್ವಪಕ್ಷ ಸಭೆ

Kaveri
Published on

ಬೆಂಗಳೂರು: ಕಾವೇರಿ, ಮಹದಾಯಿ, ಕೃಷ್ಣಾ ಮತ್ತಿತರ ಜಲವಿವಾದ, ರಾಜ್ಯದ ಅಣೆಕಟ್ಟೆಗಳಲ್ಲಿ ನೀರು ಪರಿಸ್ಥಿತಿ, ಕುರಿತು ಚರ್ಚಿಸಲು ಬುಧವಾರ ಸರ್ವಪಕ್ಷಗಳ ಸಭೆ ನಡೆಯಲಿದೆ.

ಕಾವೇರಿ ನದಿ ನೀರು ತಮಿಳುನಾಡಿಗೆ ವ್ಯಾಪಕವಾಗಿ ಹರಿಸುತ್ತಿರುವುದನ್ನು ವಿರೋಧ ಪಕ್ಷಗಳು, ರೈತ ಸಂಘಟನೆಗಳು ಅಸವಾಗಿ ಬಳಸಿಕೊಳ್ಳುವುದರ ಮುನ್ಸೂಚನೆ ಅರಿತ ಸರ್ಕಾರ, ಸರ್ವ ಪಕ್ಷ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದುಕೊಳ್ಳಲು ನಿರ್ಧರಿಸಿದೆ.

ಕೆಪಿಸಿಸಿ ಕಚೇರಿ ಬಳಿ ಅವರು ಭಾನುವಾರ ಮಾಧ್ಯಮ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬುಧವಾರ ಸರ್ವ ಪಕ್ಷ ಸಭೆ ಕರೆಯಲಾಗಿದೆ. ಎಲ್ಲರ ಅಭಿಪ್ರಾಯ ಪಡೆಯಲಾಗುವುದು. ಕಾನೂನು ಹೋರಾಟ ಹೇಗೆ ಮಾಡಬೇಕೆಂಬುದರ ಬಗ್ಗೆ ಅಡ್ವೋಕೇಟ್ ಜನರಲ್ ಅವರಿಗೆ ಬಿಟ್ಟಿದ್ದೇವೆ ಎಂದರು.

ಈ ವರ್ಷ ಸರಿಯಾದ ಪ್ರಮಾಣದಲ್ಲಿ ಮಳೆ ಬಿದ್ದಿಲ್ಲ. ಹೀಗಾಗಿ ಕರ್ನಾಟಕ ರಾಜ್ಯ ಹಾಗೂ ರೈತರ ಹಿತ ಕಾಯುವುದು ನಮ್ಮ ಕರ್ತವ್ಯ. ರಾಜ್ಯದಲ್ಲಿನ ಆಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಕುಸಿದಿದ್ದು, ಈ ವಿಚಾರವಾಗಿ ನಾವು ಸರ್ವಪಕ್ಷ ಸಭೆ ಕರೆದಿದ್ದೇವೆ ಎಂದು ಹೇಳಿದರು. ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸುತ್ತಿದ್ದೇವೆ. ಈಗಾಗಲೇ ನೀರು ಹರಿಸುವ ನಿರ್ಧಾರ ಮರುಪರಿಶೀಲಿಸುವಂತೆ ಪ್ರಾಧಿಕಾರಕ್ಕೆ ಮನವಿ ಮಾಡಿದ್ದೇವೆ. ನಾವು ರೈತರ ಹಿತವನ್ನು ಕಾಯಬೇಕು. ಕೋರ್ಟ್ ನಿರ್ಧಾರಕ್ಕೂ ಆದ್ಯತೆ ನೀಡಬೇಕು ಎಂದರು.

ಬಿಜೆಪಿ ಹಾಗೂ ದಳದ ಸ್ನೇಹಿತರು ಈ ವಿಚಾರದಲ್ಲಿ ರಾಜಕೀಯ ಮಾಡಲು ಮುಂದಾಗಿದ್ದಾರೆ. ಅವರಿಗೆ ತಮ್ಮ ಕಾಲದಲ್ಲಿ ಏನಾಗಿತ್ತು ಎಂಬ ಅರಿವಿಲ್ಲವಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದೇ ಸರ್ವಪಕ್ಷ ಸಭೆ ಕರೆದಿದ್ದೇವೆ ಎಂದು ಹೇಳಿದರು. ಸೋಮವಾರ ಬೆಂಗಳೂರು-ಮೈಸೂರು ಎಕ್ಸೃ್ಪ್ರೆಸ್ ಹೆದ್ದಾರಿ ತಡೆದು ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬಗ್ಗೆ ಕೇಳಿದಾಗ, ಅದು ಅವರದೇ ರಸ್ತೆ ಅಲ್ಲವೇ. ಅಲ್ಲಿ ಅನೇಕ ಜೀವಗಳು ಬಲಿಯಾಗಿವೆ. ಅವರು ಹೋರಾಟ ಮಾಡಲಿ ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net