

ಬೆಂಗಳೂರು: ಕಾವೇರಿ ನದಿ ನೀರು ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದ ಎಲ್ಲ ಸಂಸದರ ಸಭೆ ನಡೆದಿದೆ.
ಮಂಗಳವಾರ ತಡ ರಾತ್ರಿ ದೆಹಲಿಗೆ ಆಗಮಿಸಿದ ಡಿ.ಕೆ ಶಿವಕುಮಾರ್ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಕಾವೇರಿ ವಿಷಯದಲ್ಲಿ ತಮಿಳುನಾಡು ಸರ್ಕಾರ ಅನುಸರಿಸುತ್ತಿರುವ ಒತ್ತಡ ತಂತ್ರ ಮತ್ತು ಕೇಂದ್ರ ಸರ್ಕಾರ ಯಾವ ರೀತಿ ನೆರವಾಗಬಹುದೆಂಬುದು ಚರ್ಚೆಯ ಸಾರವಾಗಿತ್ತು.
ಬುಧವಾರ ಬೆಳಗ್ಗೆ ರಾಜ್ಯದ ಸಂಸದರೊಂದಿಗೆ ಸಿಎಂ ಹಾಗೂ ಡಿಸಿಎಂ ಉಪಾಹಾರ ಕೂಟದಲ್ಲಿ ಪಾಲ್ಗೊಂಡು ಎಲ್ಲರೂ ಒಟ್ಟಾಗಿ ಒತ್ತಡ ತರುವ ಬಗ್ಗೆ ಸಮಾಲೋಚನೆ ನಡೆಸಿದರು. ಬಳಿಕ ನಡೆದ ಸಭೆಯಲ್ಲಿ ಸಿಎಂ, ಕಾವೇರಿ ವಸ್ತು ಸ್ಥಿತಿ ಮತ್ತು ಕರ್ನಾಟಕದ ಅವಶ್ಯಕತೆಯನ್ನು ಸಭೆಯ ಗಮನಕ್ಕೆ ತಂದರು. ಕೇಂದ್ರ ಸಚಿವ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ ಖೂಬ ಸೇರಿ ಸಚಿವ, ಸಂಸದರು ಹಾಜರಿದ್ದು, ಅಭಿಪ್ರಾಯ ತಿಳಿಸಿದರು.
ಕೇಂದ್ರ ಜಲಶಕ್ತಿ ಸಚಿವರನ್ನು ರಾಜ್ಯದ ನಿಯೋಗ ಭೇಟಿಯಾಗಲಿದೆ. ಅದೇ ರೀತಿ ಪ್ರಧಾನಿ ಭೇಟಿಗೂ ಪ್ರಯತ್ನ ನಡೆಸಲಾಗಿದೆ. ರಾಜ್ಯದ ವಸ್ತುಸ್ಥಿತಿ ಅರಿಯಲು ಅಧಿಕಾರಿಗಳು, ತಜ್ಞರ ತಂಡವನ್ನು ಕಳಿಸುವ ಕುರಿತಂತೆಯೂ ಪ್ರಯತ್ನ ನಡೆದಿದೆ.