ಕಾವೇರಿ ಹೋರಾಟಕ್ಕೆ ಸದಾ ಸಿದ್ಧ

omkar gowda
ಓಂಕಾರೇಗೌಡ
Published on

ಚಿಕ್ಕಮಗಳೂರು: ಕಾವೇರಿ ನದಿಯನ್ನು ರಾಜ್ಯಕ್ಕೆ ಮೀಸಲಾಗಿಡಬೇಕು ಎಂಬ ಹೋರಾಟಕ್ಕೆ ನಾವು ಸದಾ ಸಿದ್ಧ್ದರಾಗಿದ್ದೇವೆ. ನಟರಾದ ಶಿವರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಸಹ ಕಾವೇರಿಗಾಗಿ ಜೀವ ಕೊಡಲು ಸಿದ್ಧ ಎಂದು ಹೇಳಿದ್ದು, ನಾವೂ ಅವರೊಂದಿಗೆ ಹೋರಾಟ ಆರಂಭಿಸಲಿದ್ದೇವೆ ಎಂದು ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಐ.ಕೆ.ಓಂಕಾರೇಗೌಡ ತಿಳಿಸಿದರು.
ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಆದೇಶದಿಂದ ಮೈಸೂರು ಭಾಗದಲ್ಲಿ ನೀರಿಗೆ ಹಾಹಾಕಾರ ಉಂಟಾಗಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ಈ ಬಾರಿ ಮಳೆ ಕೊರತೆಯಿಂದಾಗಿ ಕಾವೇರಿ ಕೊಳ್ಳದ ಜಲಾಶಯಗಳು ಶೇ.36 ಮಾತ್ರ ಭರ್ತಿಯಾಗಿವೆ. ಇದರಿಂದಾಗಿ ಬೆಂಗಳೂರು, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಜನ ಕುಡಿಯುವ ನೀರಿಗೆ ಹಾಗೂ ಕೃಷಿ, ಕೈಗಾರಿಕೆಗಳಿಗೆ ನೀರಿಲ್ಲದೆ ಪರಿತಪಿಸುವಂತಾಗುತ್ತದೆ. ಒಂದು ವೇಳೆ ನೀರು ಬಿಟ್ಟಿದ್ದೇ ಆದಲ್ಲಿ ಮಂಡ್ಯ, ಮೈಸೂರು ಭಾಗದ ಜನ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಕಾವೇರಿ ನೀರಿಗೆ ಅವಲಂಬಿತವಾಗಿರುವ ರಾಜ್ಯದ ಜಿಲ್ಲೆಗಳಿಗೆ ಮುಂದಿನ 6 ತಿಂಗಳ ಅವಧಿಗೆ ಕುಡಿಯುವ ಉದ್ದೇಶಕ್ಕೆ 25 ಟಿಎಂಸಿ ನೀರು ಬೇಕಾಗುತ್ತದೆ. ಹೀಗಿರುವಾಗ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಟ್ಟಲ್ಲಿ ರಾಜ್ಯದಲ್ಲಿ ಜಲ ಕ್ಷಾಮ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಘದ ಉಪಾಧ್ಯಕ್ಷ ಅಶೋಕ್‌ಕುಮಾರ್, ಉಪಾಧ್ಯಕ್ಷೆ ರೂಪಾ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net