ಕಾವೇರಿ ಪ್ರದೇಶ ರಕ್ಷಿತ ಕೃಷಿ ವಲಯ

Kaveri River
Published on

ಕಾವೇರಿ ಮುಖಜ ಭೂಮಿಯ ವ್ಯಾಪ್ತಿಯ ಎಂಟು ಜಿಲ್ಲೆಗಳನ್ನು ವಿಶೇಷ ರಕ್ಷಿತ ಕೃಷಿ ವಲಯವನ್ನಾಗಿ ಮಾಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಪ್ರಕಟಿಸಿರುವುದು ಆ ಭಾಗದ ರೈತರಲ್ಲಿ ಸಂತಸದ ಹೊನಲು ಹರಿಸಿದೆ. ಈ ವಿಶೇಷ ಕೃಷಿ ವಲಯದಲ್ಲಿ ಯಾವುದೇ ತೈಲ/ಹೈಡ್ರೋಕಾರ್ಬನ್ ಯೋಜನೆಗಳಿಗೆ ಅನುಮತಿ ನೀಡಲಾಗುವುದಿಲ್ಲ. ಈ ಬಗ್ಗೆ ಕಾನೂನನ್ನು ರೂಪಿಸಲಾಗುವುದೆಂದು ಪಳನಿಸ್ವಾಮಿ ಹೇಳಿದ್ದಾರೆ. ಪ್ರಸ್ತಾಪಿತ ಎಂಟು ಜಿಲ್ಲೆಗಳಲ್ಲಿ ಭತ್ತದ ಕಣಜ ಎಂದೇ ಖ್ಯಾತವಾದ ತಂಜಾವೂರು ಕೂಡ ಸೇರಿದೆ.

ಈ ವಲಯದಲ್ಲಿ ಕೃಷಿ ಆಧರಿತ ಕೈಗಾರಿಕೆಗಳ ಸ್ಥಾಪನೆಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಪುದುಕೊಟ್ಟೆ ೖ ಜಿಲ್ಲೆಯ ನೆಡುವಸಾಲ್ ಸೇರಿದಂತೆ ಹಲವೆಡೆ ಹೈಡ್ರೋಕಾರ್ಬನ್ ಸ್ಥಾವರ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ಸಿಎಂ ಭಾನುವಾರ ಸೇಲಂನಲ್ಲಿ ಈ ಘೋಷಣೆ ಮಾಡಿರುವುದು ಮಹತ್ವ ಪಡೆದಿದೆ.

ಯಾವ್ಯಾವ ಜಿಲ್ಲೆಗಳು?

ತಂಜಾವೂರು, ತಿರುವರೂರು, ನಾಗಪಟ್ಟಣಂ, ಪುದುಕೊಟ್ಟೆ ೖ, ಕಡಲೂರು, ಅರಿಯಲೂರು, ಕರೂರು ಮತ್ತು ತಿರುಚಿನಾಪಳ್ಳಿ- ಇವು ವಿಶೇಷ ಕೃಷಿ ವಲಯಕ್ಕೆ ಬರುವ ಎಂಟು ಜಿಲ್ಲೆಗಳು. ಚೋಳ ರಾಜ ಕರಿಕಾಲನ ಕಾಲದಿಂದಲೂ ಕಾವೇರಿ ಕಣಿವೆಯೊಂದಿಗೆ ಜನರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸುವುದಾಗಿ ಹೇಳಿದ ಸಿಎಂ ಪಳನಿಸ್ವಾಮಿ ವಿಶೇಷ ಕೃಷಿ ವಲಯದ ಯೋಜನೆಯನ್ನು ಸಾರ್ವಜನಿಕ ಸಭೆಯೊಂದರಲ್ಲಿ ಅನಾವರಣ ಗೊಳಿಸಿದರು. ವಿಶೇಷ ವಲಯ ಮಾಡುವುದರಿಂದ ರೈತರಿಗೆ ಅನೇಕ ಪ್ರಯೋಜನ ಸಿಗಲಿವೆ. ಮುಖಜ ಭೂಮಿ ಪ್ರದೇಶದ ರೈತರ ಭವಿಷ್ಯ ಹಸನಾಗಲಿದೆ ಎಂಬುದು ಪಳನಿಸ್ವಾಮಿ ಅಭಿಪ್ರಾಯ. ಫೆಬ್ರವರಿ 14ರಂದು ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಲಿದೆ. ವಿಶೇಷ ಕೃಷಿ ವಲಯಕ್ಕೆ ಸಂಬಂಧಿಸಿದ ಮಸೂದೆಯನ್ನು ಇದೇ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ. ಈ ಬಗ್ಗೆ ಸರ್ಕಾರ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಿದೆ.

ತೈಲ, ಅನಿಲ ನಿಕ್ಷೇಪ

ನೆಡುವಸಾಲ್ ಮತ್ತು ಕರೈಕಲ್​ನಲ್ಲಿ ಗುರುತಿಸಲಾದ ಪ್ರದೇಶಗಳಲ್ಲಿ 4,30,000 ಮೆಟ್ರಿಕ್ ಟನ್ ತೈಲ ಹಾಗೂ ಅಷ್ಟೇ ಅನಿಲವಿದೆ ಎಂದು ಕೇಂದ್ರ ಸರ್ಕಾರ 2017ರಲ್ಲಿ ಹೇಳಿತ್ತು. ತೈಲ ಹಾಗೂ ಅನಿಲ ತೆಗೆಯಲು 700ಕ್ಕೂ ಹೆಚ್ಚು ಬಾವಿಗಳನ್ನು ಕೊರೆಯಲಾಗಿದೆ. ಈ ಚಟುವಟಿಕೆಗಳಿಂದ ಕೃಷಿಗೆ ಯಾವುದೇ ತೊಂದರೆಯಾಗುವುದಿಲ್ಲ ಹಾಗೂ ಆರೋಗ್ಯ ಸಮಸ್ಯೆಯೂ ಉದ್ಭವಿಸದು ಎಂದೂ ಸರ್ಕಾರ ಹೇಳಿತ್ತು.

ಕಾವೇರಿ ಮುಖಜ ಭೂಮಿ ವಿಸ್ತಾರ

ಕಾವೇರಿ ಮುಖಜ ಭೂಮಿ 28 ಲಕ್ಷ ಎಕರೆ ವಿಸ್ತಾರವಾಗಿದ್ದು ವಾರ್ಷಿಕ 33 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಬೆಳೆಯಲಾಗುತ್ತಿದೆ. 2017 ಮತ್ತು 2018ರಲ್ಲಿ ಬಂದ ಪ್ರವಾಹದಂಥ ಪ್ರಾಕೃತಿಕ ವಿಪತ್ತಿನ ನಡುವೆಯೂ ರೈತಾಪಿ ವರ್ಗದ ಕೃಷಿ ಚಟುವಟಿಕೆ ಅಬಾಧಿತವಾಗಿದೆ.

ರೈತರಿಂದ ಪಟಾಕಿ ಸಂಭ್ರಮ

ರಕ್ಷಿತ ಕೃಷಿ ವಲಯದ ಘೋಷಣೆ ರೈತ ಸಮುದಾಯದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ತಿರುಚ್ಚಿಯ ರೈತರು ಪಟಾಕಿ ಸಿಡಿಸಿ ಹಾಗೂ ಸಿಹಿ ತಿನಿಸಿ ಸಂತೋಷ ಹಂಚಿಕೊಂಡಿದ್ದಾರೆ. ಸರ್ಕಾರ ತಕ್ಷಣವೇ ಆಧ್ಯಾದೇಶ ಹೊರಡಿಸಿ ಇದನ್ನು ಅನುಷ್ಠಾನಗೊಳಿಸಬೇಕು. ಕೇಂದ್ರ ಸರ್ಕಾರ ಕೂಡಲೇ ಗೆಜೆಟ್ ಪ್ರಕಟಣೆ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ.

ಒಂದೇ ಏಟಿಗೆ ಎರಡು ಹಕ್ಕಿ!

ಕಾವೇರಿ ಕಣಿವೆಯ ಜಿಲ್ಲೆಗಳನ್ನು ರಕ್ಷಿತ ಕೃಷಿ ವಲಯವನ್ನಾಗಿ ಮಾಡುವ ಘೋಷಣೆ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಮೇಲಾಟಕ್ಕೆ ಆಹಾರ ಒದಗಿಸಿದೆ.

ಇದು ಸರ್ಕಾರದ ರೈತ-ಪರ ನೀತಿಗೆ ಇಂಬು ನೀಡುವ ಕ್ರಮ ಎಂದು ಆಳುವ ಎಐಎಡಿಎಂಕೆ ಕಾರ್ಯಕರ್ತರು ಮತ್ತು ಬೆಂಬಲಿಗರು ಪ್ರತಿಪಾದಿಸುತ್ತಿದ್ದಾರೆ. ಅದೇ ವೇಳೆ, ಹೈಡ್ರೋಕಾರ್ಬನ್ ಯೋಜನೆ ವಿಷಯ ಕೈಗೆತ್ತಿಕೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಸಂಘರ್ಷ ನಡೆಸಲು ಮುಂದಾದ ಡಿಎಂಕೆಯನ್ನು ಮಣಿಸಲೂ ಇದು ನೆರವಾಗುತ್ತದೆ ಎಂಬುದೂ ಅವರ ಭಾವನೆ. ಇತ್ತ, ಪಿಎಂಕೆ ಮುಖ್ಯಸ್ಥ ಎಸ್. ರಾಮದಾಸ್, ಸರ್ಕಾರದ ಘೋಷಣೆ ತಮ್ಮ ಪಕ್ಷಕ್ಕೆ ಸಿಕ್ಕ ಜಯ ಎಂದು ಹೇಳಿಕೊಂಡಿದ್ದಾರೆ. ಈ ವಿಚಾರದಲ್ಲಿ ಮೊದಲು ದನಿಯೆತ್ತಿದ್ದೇ ಪಿಎಂಕೆ ಎಂದು ಅವರು ಹೇಳಿದ್ದಾರೆ. ಇದರಿಂದ ಕಾವೇರಿ ಕೊಳ್ಳದ ಜಿಲ್ಲೆಗಳು ಮರುಭೂಮಿಯಾಗುವುದು ತಪು್ಪತ್ತದೆ ಎಂದಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಹಿಂದೆಯೇ ಈ ಯೋಜನೆಯನ್ನು ರೂಪಿಸಿದ್ದು ಹಾಲಿ ಸಿಎಂ ಅದನ್ನು ಸಾಕಾರಗೊಳಿಸಿದ್ದಾರೆ ಎಂಬುದು ತಂಜಾವೂರು ಜಿಲ್ಲಾ ರೈತ ರಕ್ಷಣಾ ಸಮಿತಿಯ ಕಾರ್ಯದರ್ಶಿ ಸ್ವಾಮಿಮಲೈ ಎಸ್ ವಿಮಲನಾಥನ್ ಅವರ ಅಭಿಪ್ರಾಯ.

ಕಾವೇರಿ ಕಣಿವೆ ಪ್ರದೇಶದಲ್ಲಿ ತೈಲ ತೆಗೆಯುವ ಯೋಜನೆಗಳಿಗೆ ರೈತರ ವಿರೋಧವನ್ನು ಸ್ವತಃ ರೈತನಾಗಿರುವ ನಾನು ಅರ್ಥಮಾಡಿಕೊಳ್ಳಬಲ್ಲೆ. ಹೈಡ್ರೋಕಾರ್ಬನ್​ನಂಥ ಯೋಜನೆಗಳಿಂದ ತಮ್ಮ ಜೀವನೋಪಾಯ ನಾಶವಾಗಬಹುದೆಂಬ ರೈತರು ಹಾಗೂ ಕೃಷಿ ಕೂಲಿಕಾರರ ಆತಂಕ ಸರಿಯಾಗಿಯೇ ಇದೆ. | ಕೆ. ಪಳನಿಸ್ವಾಮಿ ತಮಿಳುನಾಡು ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net