

ಬೆಂಗಳೂರು: ಕರ್ನಾಟಕದ ದಕ್ಷಿಣ ಜಿಲ್ಲೆಗಳ ಜತೆಗೆ ಕೇರಳ, ಪುದುಚೆರಿ, ತಮಿಳುನಾಡಿಗೂ ಕಾವೇರಿ ನದಿ ಆಸರೆಯಾಗಿದ್ದು, ಆ ತಾಯಿಗೆ ಪ್ರಾರ್ಥನೆ ಸಲ್ಲಿಸಬೇಕೆಂಬ ಜನರ ಭಾವನೆಗೆ ಸ್ಪಂದಿಸಿ ‘ಕಾವೇರಿ ಆರತಿ’ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡರು.
ವಿಧಾನಸೌಧದಲ್ಲಿ ಕಾರ್ಯಕ್ರಮದ ಕುರಿತು ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ರೈತ ಮುಖಂಡರ ಜತೆಗೆ ಬುಧವಾದ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ತಪ್ಪುಗ್ರಹಿಕೆಯಿಂದ ಕಾರ್ಯಕ್ರಮ ವಿರೋಧಿಸುತ್ತಿದ್ದು, ಮತ್ತೊಮ್ಮೆ ಎಲ್ಲರ ಜತೆಗೆ ಸಭೆ ಮಾಡುವೆ ಎಂದರು.
ಕಾವೇರಿ ಆರತಿ ಕಾರ್ಯಕ್ರಮಕ್ಕೆ ಅಂತಿಮ ರೂಪ ನೀಡಿ, ಮುಂದಿನ ಮೂರ‌್ನಾಲ್ಕುಗಳಲ್ಲಿ ವಿವರ ಪ್ರಕಟಿಸಲಾಗುವುದು. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬುದು ನಮ್ಮ ನಂಬಿಕೆಯಾಗಿದೆ ಎಂದು ಹೇಳಿದರು.
ಗಂಗಾ ಆರತಿ ಬಗ್ಗೆ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದ ತಂಡ ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ನಮ್ಮ ರಾಜ್ಯದಲ್ಲಿ ತುಂಗಾ ಆರತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಕಾವೇರಿ ಆರತಿಯು ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ಬಿಂಬಿಸುವ ಜತೆಗೆ ಪ್ರವಾಸಿಗರ ಆಕರ್ಷಣೆಗೂ ನೆರವಾಗಲಿದೆ ಎಂದು ಸಮಜಾಯಷಿ ನೀಡಿದರು.
ಚಾಮುಂಡಿ ಬೆಟ್ಟದಲ್ಲಿ ಪ್ರಾಧಿಕಾರ ರಚಿಸಿ ಅಭಿವೃದ್ಧಿ ಮಾಡಲಾಗುತ್ತಿದೆ. ಟಿವಿಎಸ್ ಸೇರಿ ಅನೇಕ ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿಯಡಿ ದೇವಾಲಯಗಳ ಅಭಿವೃದ್ಧಿ ಮಾಡುತ್ತಿದ್ದಾರೆ. ಕಾವೇರಿ ಆರತಿಯು ಕೆಆರ್‌ಎಸ್ ಉದ್ಯಾನವನದೆಡೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಸದ್ಯ ವಾರಕ್ಕೆ ಮೂರು ದಿನ ಈ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೇವೆ. ಇನ್ನು ಕಾರ್ಯಕ್ರಮದ ಬಳಿ 10 ಸಾವಿರ ಜನರಿಗೆ ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ ಸುಮಾರು 30% ಪಾವತಿ ಪ್ರವೇಶವಿರುತ್ತದೆ. 70% ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಕಾರ್ಯಕ್ರಮದ ವೇಳೆ ವಾಹನ ನಿಲುಗಡೆಗಾಗಿ 70-80 ಎಕರೆ ಜಾಗವನ್ನು ಮೀಸಲಿಡಲಾಗಿದೆ. ರಸ್ತೆಗಳನ್ನು ಉನ್ನತೀಕರಣಗೊಳಿಸಲಾಗುವುದು ಎಂದು ವಿವರಿಸಿದರು.
ಕಾರ್ಯಕ್ರಮದಿಂದ 1,500 ನೇರ ಉದ್ಯೋಗ ಸೃಷ್ಟಿಯಾಗಲಿವೆ. 500 ಪುರೋಹಿತರು, 300 ಕಲಾವಿದರಿಗೆ ಅವಕಾಶ ಸಿಗಲಿದೆ. ಪರೋಕ್ಷ ಉದ್ಯೋಗ, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ಹೀಗಾಗಿ ವಿವಿಧ ಇಲಾಖೆಗಳ ಸಹಭಾಗಿತ್ವದಡಿ ಕಾರ್ಯಕ್ರಮಕ್ಕೆ ವಿನಿಯೋಗಿಸುವ ಮೊತ್ತ ದೊಡ್ಡದಲ್ಲವೆಂದು ಪ್ರತಿಪಾದಿಸಿದರು.
ಅಣೆಕಟ್ಟೆಗೆ ಬಾಧಕವಾಗಬಹುದು ಎಂಬ ಆತಂಕದಿಂದ ರೈತರು ಅಪಸ್ವರ ಎತ್ತಿದ್ದರು. ಕಾರ್ಯಕ್ರಮ ಎಲ್ಲಿ ನಡೆಯಲಿದೆ ಎಂದು ತಿಳಿಯದ ಕಾರಣ ವಿರೋಧ ವ್ಯಕ್ತಪಡಿಸಿದ್ದರಲ್ಲಿ ತಪ್ಪೇನಿಲ್ಲ. ಅಣೆಕಟ್ಟೆಗೆ ಬಹಳ ದೂರ ಬೆಂಗಳೂರಿಗೆ ನೀರು ಹರಿದು ಹೋಗುವ ಸ್ಥಳ ಸೌಂದರ್ಯೀಕರಿಸಿ ಕಾರ್ಯಕ್ರಮ ಏರ್ಪಡಿಸುವುದನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಅಣೆಕಟ್ಟು ವಿಚಾರದಲ್ಲಿ ನಮಗೂ ಜವಾಬ್ದಾರಿ ಇದೆ. ಈ ಕಾರ್ಯಕ್ರಮ ಕಾವೇರಿ ತಾಯಿಗೆ ಪ್ರಾರ್ಥಿಸುವ ಕಾರ್ಯಕ್ರಮ. ಕೊಡಗು, ಮಂಗಳೂರು, ಮೈಸೂರು, ಮಂಡ್ಯ ಸಂಸ್ಕೃತಿ ಈ ಕಾರ್ಯಕ್ರಮದಲ್ಲಿರಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.