ಕೌದಿ ಹೊಲಿಯುವವರ ಸಮ್ಮೇಳನ ಆಯೋಜನೆ

28 Dwd 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕೌದಿ ಹೊಲಿಯುವವರು ಅಲಕ್ಷಿತರಾಗಿದ್ದಾರೆ. ಕೌದಿ ಹೊಲಿಯುವವರ ಪರಿಸ್ಥಿತಿ ಗಂಭೀರವಿದೆ. ಕೌದಿಗಳ ಖರೀದಿ ಹೆಚ್ಚಾದರೆಕೌದಿ ಹೊಲಿಯುವವರಿಗೆ ನಿರಂತರ ಕೆಲಸ ಸಿಗುತ್ತದೆ. ಈ ದಿಶೆಯಲ್ಲಿ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್‌ನಲ್ಲಿ ಕೌದಿ ಹೊಲಿಯುವವರ ಸಮ್ಮೇಳನ ಏರ್ಪಡಿಸಲಾಗುವುದು ಎಂದು ಉತ್ಸವ ರಾಕ್ ಗಾರ್ಡನ್ ನಿರ್ದೇಶಕ ಪ್ರಕಾಶ ದಾಸನೂರ ಹೇಳಿದರು.

ನಗರದ ಕೇಂದ್ರ ಕಾರಾಗೃಹದಲ್ಲಿ ಮೈಸೂರಿನ ಕವಿತಾ ಕಲಾ ತಂಡದಿ0ದ ಏರ್ಪಡಿಸಿದ್ದ `ಕೌದಿ' ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಕೌದಿ ಎಂದರೆ ಯಾವುದಕ್ಕೂ ಜಗ್ಗದು ಎಂಬರ್ಥ. ಅವು ಅಷ್ಟೊಂದು ಗಟ್ಟಿ. ಅವುಗಳಿಗೆ ಚಾದರ, ರಗ್ಗು, ರಜಾಯಿಗಿಂತ ಬಹಳ ಕಿಮತ್ತು. ನಮ್ಮದು ಕೂಡು ಕುಟುಂಬ. ಹೀಗಾಗಿ ಚಿಕ್ಕವರಿದ್ದಾಗ ಕೌದಿಗಾಗಿ ಜಗಳವಾಡಿದ್ದೇ ಎಂದರು.

ಉತ್ಸವ ರಾಕ್ ಗಾರ್ಡನ್ ಕ್ಯುರೇಟರ್ ಡಾ. ವೇದಾರಾಣಿ ದಾಸನೂರ ಮಾತನಾಡಿ, ಎಲ್ಲ ಬಣ್ಣಗಳ ಬಟ್ಟೆಗಳಿಂದ ಹೊಲಿದ ಕೌದಿ ಕಾಮನಬಿಲ್ಲಿನಂತೆ. ಛಿದ್ರಗೊಂಡ ಮನಸುಗಳನ್ನು ಕೂಡಿಸುವ ಕಲೆ ಕೌದಿಗಿದೆ. ಅದು ಬಳಸಿ ಬಿಸಾಡದ ಸಾವಯವ ಸಂಸ್ಕೃತಿಯ ಪ್ರತೀಕ. ಚೌಕಟ್ಟಿನ ಕೌದಿಗಳಂತೆ ನಮ್ಮ ಬದುಕಿಗೂ ಚೌಕಟ್ಟಿದ್ದರೆ ಬದುಕು ಸುಂದರ ಎಂದರು.

ಜೈಲು ಅಧೀಕ್ಷಕ ಮಹದೇವ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ನಂತರ ಗಣೇಶ ಅಮೀನಗಡ ರಚಿಸಿದ `ಕೌದಿ' ನಾಟಕವನ್ನು ಕಲಬುರ್ಗಿಯ ಕಲಾವಿದೆ ಭಾಗ್ಯಶ್ರೀ ಪಾಳಾ ಪ್ರಸ್ತುತಪಡಿಸಿದರು. ಪದ್ಮಾ ರಾಯಚೂರು ಸಂಗೀತ ಹಾಗೂ ಬೆಳಕನ್ನು ನಿರ್ವಹಿಸಿದರು. ಸಹಾಯಕ ಅಧೀಕ್ಷಕ ಬಿ.ಆರ್. ನಿರ್ಮಲಾ, ಜೈಲಿನ ಶಿಕ್ಷಕ ಪಿ.ಬಿ. ಕುರಬೇಟ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net