ಬಾಲಿವುಡ್ ನಟಿ ಕತ್ರಿನಾ ಕೈಫ್ ತಾಯಿಯಾದ ಬಳಿಕ ಮತ್ತೆ ಯಾವುದೇ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಕಳೆದ ನ. 7ರಂದು ‘ವಿಹಾನ್ ಕೌಶಲ್’ ಎಂಬ ಗಂಡು ಮಗುವಿಗೆ ಜನ್ಮ ನೀಡಿದ್ದ ಅವರು, ಸದ್ಯ ಮಗುವಿನ ಪೋಷಣೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ತಾಯಿಯಾದ ಬಳಿಕ ಕತ್ರಿನಾ ಚಿತ್ರರಂಗದಿಂದ ದೂರ ಉಳಿಯುತ್ತಾರಾ ಎಂಬ ಪ್ರಶ್ನೆಯೂ ಕೇಳಿಬರುತ್ತಿತ್ತು. ಆದರೆ, ಅದನ್ನು ಸುಳ್ಳಾಗಿಸಿರುವ ಅವರು, 2027ಕ್ಕೆ ಬಾಲಿವುಡ್‌ಗೆ ಮರಳುವ ಆಲೋಚನೆಯಲ್ಲಿದ್ದಾರಂತೆ. ಈಗಾಗಲೇ ಹಲವು ಸ್ಟ್ರಿಪ್ಟ್‌ಗಳನ್ನು ಕೇಳಿರುವ ಕತ್ರಿನಾಗೆ ವೆಬ್‌ಸರಣಿ ಕಥೆಯೊಂದು ಇಷ್ಟವಾಗಿದೆಯಂತೆ. ಅದರಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ವಿಹಾನ್ ಚಿಕ್ಕವನಿರುವ ಇರುವ ಕಾರಣ ಪೋಷಣೆಗೆ ಸಮಯ ಮೀಸಲಾಗಿರಿಸಿದ್ದಾರೆ. ಹಾಗಾಗಿ, 2027ರ ದ್ವಿತೀಯಾರ್ಧದಲ್ಲಿ ಕತ್ರಿನಾ ಆ್ಯಕ್ಟಿಂಗ್‌ಗೆ ಮರಳಲಿದ್ದಾರೆ. ಅದಕ್ಕಾಗಿ ಈಗಿನಿಂದಲೇ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ಒಟಿಟಿ ಪ್ಲಾಟ್‌ಾರಂ ಹೆಚ್ಚು ಜನಪ್ರಿಯಗೊಂಡಿದ್ದು, ಕಲಾವಿದರು ಕೂಡ ವಿಭಿನ್ನವಾಗಿ ಕಾಣಿಸಿಕೊಳ್ಳಬಹುದು ಎಂಬುದು ಕತ್ರಿನಾ ಆಲೋಚನೆ. ಹೀಗಾಗಿಯೇ ಒಟಿಟಿಯತ್ತ ಕತ್ರಿನಾ ಹೆಚ್ಚು ಗಮನ ಹರಿಸಿದ್ದಾರೆ ಎಂದು ತಿಳಿದುಬಂದಿದೆ. 2024ರ ಜ.12ರಂದು ತೆರೆಕಂಡಿದ್ದ ‘ಮೆರಿ ಕ್ರಿಸ್ಮಸ್’ ಬಳಿಕ ಕತ್ರಿನಾ ಬೆಳ್ಳಿತೆರೆ ಮೇಲೆ ಮತ್ತೆ ಕಾಣಿಸಿಕೊಂಡಿಲ್ಲ. ತಾಯಿಯಾದ ಬಳಿಕ ಹಲವು ಬಾಲಿವುಡ್ ತಾರೆಯರು ನಟನೆಗೆ ಮರಳಿದವರಿದ್ದಾರೆ. ಮಾಧುರಿ ದೀಕ್ಷಿತ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಸಾಲಿಗೆ ಇದೀಗ ಕತ್ರಿನಾ ಸೇರಲು ಸಿದ್ಧರಾಗುತ್ತಿದ್ದಾರೆ. -ಏಜೆನ್ಸೀಸ್