ಕೆಪಿಎಸ್​ಸಿಯ ಎರಡು ಆಯ್ಕೆಪಟ್ಟಿ ರದ್ದುಪಡಿಸಿದ ಕೆಎಟಿ

KPSC
Published on

* 1998, 1999ರ ಕೆಎಎಸ್ ನೇಮಕ ಪ್ರಕರಣ * ಹೈಕೋರ್ಟ್ ಆದೇಶದಂತೆ ಪಟ್ಟಿ ಪ್ರಕಟಿಸಿದ್ದ ಆಯೋಗ

ಬೆಂಗಳೂರು: 1998 ಹಾಗೂ 1999ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿರುವ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ), ಹೈಕೋರ್ಟ್ ಆದೇಶದಂತೆ ಕೆಪಿಎಸ್​ಸಿ 2019ರ ಜ.25 ಹಾಗೂ ಆ.22ರಂದು ಪ್ರಕಟಿಸಿದ್ದ ಎರಡೂ ಆಯ್ಕೆ ಪಟ್ಟಿಗಳನ್ನು ಅನೂರ್ಜಿತಗೊಳಿಸಿದೆ.

ಎಸ್.ಎಸ್.ಮಧುಕೇಶ್ವರ್ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಕೆಎಟಿ ಅಧ್ಯಕ್ಷ ಡಾ.ಕೆ.ಭಕ್ತವತ್ಸಲ ಹಾಗೂ ಸದಸ್ಯ ಎಸ್.ಕೆ.ಪಟ್ನಾಯಕ್ ಅವರಿದ್ದ ಪೀಠ ಮಂಗಳವಾರ ಪ್ರಕಟಿಸಿತು. ಇದೇ ವೇಳೆ, 2002ರಲ್ಲಿ ಅಂದಿನ ನ್ಯಾ.ಆರ್.ವಿ.ರವೀಂದ್ರನ್ ಅವರಿದ್ದ ಪೀಠ ನೀಡಿದ್ದ ಆದೇಶದಂತೆ ಕೆಪಿಎಸ್​ಸಿ ಹೊಸದಾಗಿ ಆಯ್ಕೆಪಟ್ಟಿ ಪ್ರಕಟಿಸಬೇಕು ಎಂದು ಕೆಎಟಿ ಆದೇಶಿಸಿದೆ.

ಅರ್ಜಿದಾರರ ಆಕ್ಷೇಪವೇನು?

2016ರಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪಿನ ಒಂದನೇ ಅಂಶವನ್ನು ಸರ್ಕಾರ ಜಾರಿಗೊಳಿಸಿಲ್ಲ. ಅದರಿಂದ ಹೊರಬರಲು ಸರ್ಕಾರ ಹೊಸ ಕಾಯ್ದೆ ಜಾರಿಗೊಳಿಸಿದೆ. ಅಲ್ಲದೆ ಎರಡು ಮತ್ತು ಮೂರನೇ ಮೌಲ್ಯಮಾಪನದಲ್ಲಿ 20 ಅಂಕಗಳ ವ್ಯತ್ಯಾಸ ಬಂದರೆ, ಅಂಥವರ ಉತ್ತರ ಪತ್ರಿಕೆಗಳನ್ನು ಮತ್ತೆ ಮೌಲ್ಯಮೌಪನಕ್ಕೆ ಒಪ್ಪಿಸಬೇಕು ಎಂದು ನೀಡಿದ್ದ ಆದೇಶ ಪಾಲನೆ ಮಾಡಿಲ್ಲ. ಜತೆಗೆ ಹೈಕೋರ್ಟ್ ಆದೇಶದಂತೆ, 91 ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನದ ಅಂಕ ಪರಿಗಣಿಸಬೇಕಿತ್ತು, ಆದರೆ, 91 ಅಭ್ಯರ್ಥಿಗಳ ಅಂಕಗಳನ್ನು ಪರಿಗಣಿಸಲಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ಹೈಕೋರ್ಟ್ ಆದೇಶದಂತೆ ಸಿದ್ಧಪಡಿಸಿರುವ ಆಯ್ಕೆಪಟ್ಟಿಗಳನ್ನು ಮೊದಲು ಹೈಕೋರ್ಟ್ ಒಪ್ಪಿದ್ದು, ಆನಂತರ ಸುಪ್ರೀಂಕೋರ್ಟ್ ಸಹ ಅನುಮೋದಿಸಿದೆ. ಆದ್ದರಿಂದ ಯಾವೊಬ್ಬ ಅಭ್ಯರ್ಥಿಗೂ ಕೆಎಟಿ ಮುಂದೆ ಕುಂದುಕೊರತೆ ಮಂಡಿಸಲು ಅವಕಾಶವಿಲ್ಲ. 2016ರಲ್ಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು, ಈ ವಿಚಾರದಲ್ಲಿ ಕೆಎಟಿ ಮಧ್ಯಪ್ರವೇಶಿಸುವಂತಿಲ್ಲ ಎಂದು ಕೆಪಿಎಸ್​ಸಿ ವಾದ ಮಂಡಿಸಿತ್ತು. ಆಯೋಗದ ವಾದವನ್ನು ಸರ್ಕಾರವೂ ಒಪ್ಪಿಕೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net