ಬೆಂಗಳೂರು:
ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸುವ ತೀರ್ಮಾನ ಕೈಗೊಂಡಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಮತ್ತೊಂದು ಅಧಿಸೂಚನೆ ಹೊರಡಿಸಿ ರಾಜ್ಯದ 20,668 ಚದರ ಕಿಲೋ ಮೀಟರ್‌ಗೂ ಹೆಚ್ಚು ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಹೇಳಿದೆ. ರಾಜ್ಯದಲ್ಲಿ ಚಾಮರಾಜನಗರ, ಕೊಡಗು, ಮೈಸೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಬೆಳಗಾವಿಯ 33 (ತಾಲ್ಲೂಕು ಪುನರ್ ವಿಂಗಡಣೆಯ ನಂತರ 39) ತಾಲ್ಲೂಕುಗಳ 1533 ಗ್ರಾಮಗಳನ್ನು ಗುರುತಿಸಲಾಗಿದೆ ಎಂದರು.
ಸಂಜಯ್ ಕುಮಾರ್ ಸಮಿತಿ:
ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಕುರಿತಂತೆ ಎಲ್ಲ ಬಾಧ್ಯಸ್ಥರೊಂದಿಗೆ ಅಂದರೆ 1533 ಗ್ರಾಮಗಳ ವ್ಯಾಪ್ತಿಯ ಜನಪ್ರತಿನಿಧಿಗಳು, ನಿವಾಸಿಗಳೊಂದಿಗೆ ಚರ್ಚಿಸಿ, ಸಾಧಕ ಬಾಧಕ ಅರಿತು ವರದಿ ನೀಡಲು ನಿವೃತ್ತ ಐ.ಎ್.ಎಸ್. ಅಧಿಕಾರಿ ಸಂಜಯ್ ಕುಮಾರ್ ಸಮಿತಿ ರಚಿಸಿತ್ತು. ಆ ಸಮಿತಿ ಸದಸ್ಯರು ತಮ್ಮನ್ನು ಔಪಚಾರಿಕವಾಗಿ ಭೇಟಿ ಮಾಡಿದರು. ಆದರೆ ಯಾವುದೇ ಗ್ರಾಮಕ್ಕೆ ಭೇಟಿ ನೀಡಲಿಲ್ಲ. ಜನರೊಂದಿಗೆ ಮಾತುಕತೆ ನಡೆಸಲಿಲ್ಲ ಎಂದರು.