ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಗೆ ಕಾಶ್ಮೀರ ಕಾರಣ: ಶಹಬಾಜ್ ಷರೀಫ್| Shahbaz Sharif

Shahbaz Sharif
Published on

Shahbaz Sharif: 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಭಾರತದ ನಿರ್ಧಾರವನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತೀವ್ರವಾಗಿ ಟೀಕಿಸಿದ್ದಾರೆ. ಅಲ್ಲದೆ, ಕಾಶ್ಮೀರ ವಿಷಯವು ಪಾಕಿಸ್ತಾನ ಮತ್ತು ಭಾರತ ನಡುವಿನ ಉದ್ವಿಗ್ನತೆಗೆ ಪ್ರಮುಖ ಕಾರಣ ಎಂದು ಮಂಗಳವಾರ (ಆಗಸ್ಟ್ 5) ಹೇಳಿದ್ದಾರೆ.

ಯೌಮ್-ಇ-ಇಸ್ತೆಸಲ್ ಸಂದರ್ಭದಲ್ಲಿ ಮಾತನಾಡಿದ ಪಾಕಿಸ್ತಾನಿ ಪ್ರಧಾನಿ, ಉಭಯ ದೇಶಗಳ ನಡುವಿನ ಉದ್ವಿಗ್ನತೆಗೆ ಕಾಶ್ಮೀರ ಸಮಸ್ಯೆ ಪ್ರಮುಖ ಕಾರಣವಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಿಗೆ ಅನುಗುಣವಾಗಿ ಕಾಶ್ಮೀರಿ ಜನರ ಇಚ್ಛೆ ಮತ್ತು ಆಕಾಂಕ್ಷೆಗಳು ಮಾತ್ರ ಮುಂದಿನ ದಾರಿ ಎಂದು ಅವರು ತಿಳಿಸಿದ್ದಾರೆ.

ಕಾಶ್ಮೀರ ಸಮಸ್ಯೆಯ ನ್ಯಾಯಯುತ ಪರಿಹಾರವು ಪಾಕಿಸ್ತಾನದ ವಿದೇಶಾಂಗ ನೀತಿಯ ಪ್ರಮುಖ ಆಧಾರ ಸ್ತಂಭವಾಗಿದೆ ಎಂದು ಹೇಳಿದರು. 2019 ಆಗಸ್ಟ್ 5 ರಂದು ಭಾರತವು ಕಾಶ್ಮೀರ ವಿಷಯದಲ್ಲಿ ಏಕಪಕ್ಷೀಯ ಕ್ರಮಗಳನ್ನು ಕೈಗೊಂಡಿದೆ. ಈ ವಿಚಾರವಾಗಿ ಅಂತರರಾಷ್ಟ್ರೀಯ ಸಮುದಾಯವು ರಚನಾತ್ಮಕ ಪಾತ್ರವನ್ನು ವಹಿಸಬೇಕೆಂದು ಶೆಹಬಾಜ್ ಒತ್ತಾಯಿಸಿದರು.

ಭಾರತ ಸರ್ಕಾರ 2019 ಆಗಸ್ಟ್ 5 ರಂದು 370 ನೇ ವಿಧಿಯನ್ನು ರದ್ದುಗೊಳಿಸಿತು, ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.

ಭಾರತದ ಕ್ರಮದ ವಿರುದ್ಧ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಪಾಕಿಸ್ತಾನವು ಪ್ರತಿವರ್ಷ ಆಗಸ್ಟ್ 5ರ ದಿನವನ್ನು 'ಯೌಮ್-ಇ-ಇಸ್ತೆಸಲ್' ಎಂದು ಆಚರಿಸುತ್ತಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net