

Tariff Threat: ರಷ್ಯಾದ ತೈಲ ಖರೀದಿ ಉಲ್ಲೇಖಿಸಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮೇಲೆ ಸುಂಕ ಹೆಚ್ಚಳ ಮಾಡುವುದಾಗಿ ಬೆದರಿಕೆ ಹಾಕಿದ ಬಳಿಕ, ಇದೀಗ ಭಾರತದ ತೈಲ ಆಮದಿನ ಮೇಲೆ ಆಕ್ರಮ ವ್ಯಾಪರ ಒತ್ತಡ ಹೇರುತ್ತಿದೆ ಎಂದು ರಷ್ಯಾ ಆರೋಪಿಸಿದೆ.
''ರಷ್ಯಾದೊಂದಿಗಿನ ವ್ಯಾಪಾರ ಸಂಬಂಧಗಳನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಅನೇಕ ದೇಶಗಳಿಗೆ ಬೆದರಿಕೆ ಹಾಕುವ ಹೇಳಿಕೆಗಳನ್ನು ನಾವು ಕೇಳಿದ್ದೇವೆ. ಅಂತಹ ಹೇಳಿಕೆಗಳನ್ನು ನಾವು ಕಾನೂನು ಬದ್ಧವೆಂದು ಪರಿಗಣಿಸುವುದಿಲ್ಲ'' ಎಂದು ರಷ್ಯಾದ ಕೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಸಾರ್ವಭೌಮ ರಾಷ್ಟ್ರಗಳು ತನ್ನದೇ ಆದ ವ್ಯಾಪಾರ ಪಾಲುದಾರರನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿವೆ ಎಂದು ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಯುಕ್ರೇನ್ ಜತೆಗಿನ ಸಂಘರ್ಷವನ್ನು ಕೊನೆಗೊಳಿಸಲು ರಷ್ಯಾ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ರಷ್ಯಾ ಮತ್ತು ಅದರ ಇಂಧನ ರಫ್ತುಗಳನ್ನು ಖರೀದಿಸುವ ದೇಶಗಳ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸುವುದಾಗಿ ಟ್ರಂಪ್ ಶುಕ್ರವಾರ ಘೋಷಿಸಿದ್ದರು. ಆದಾಗ್ಯೂ, ಗಡುವಿನ ಹೊರತಾಗಿಯೂ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧದ ಬಗ್ಗೆ ತಮ್ಮ ನಿಲುವಿನ ಬಗ್ಗೆ ಯಾವುದೇ ಬದಲಾವಣೆಯನ್ನು ತೋರಿಸಿಲ್ಲ. ಮತ್ತೊಂದು ಬೆಳವಣಿಗೆಯಲ್ಲಿ, ಟ್ರಂಪ್ ಅವರ ಸುಂಕ ಬೆದರಿಕೆಗಳನ್ನು "ಸಮರ್ಥನೀಯವಲ್ಲ" ಎಂದು ಭಾರತ ಹೇಳಿಕೊಂಡಿದೆ. ಅಲ್ಲದೆ ದೇಶದ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದೆ.
ಯುಕ್ರೇನ್ ಮೇಲೆ ನಿರಂತರವಾಗಿ ಯುದ್ಧ ನಡೆಸುತ್ತಿರುವ ರಷ್ಯಾ ಜೊತೆಗೆ ಭಾರತ ಕೈಜೋಡಿಸಿರುವ ವಿಷಯ ಟ್ರಂಪ್ಗೆ ಹಿಡಿಸಲಿಲ್ಲ. ದೊಡ್ಡ ಪ್ರಮಾಣದಲ್ಲಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತ ಸರ್ಕಾರದ ನಿರ್ಧಾರ ಅಮೆರಿಕ ಅಧ್ಯಕ್ಷರಿಗೆ ಸರಿ ಅನಿಸಲಿಲ್ಲ. ರಷ್ಯಾ, ಯುಕ್ರೇನ್ ವಿರುದ್ಧದ ದಾಳಿ ನಿಲ್ಲಿಸಬೇಕು ಎಂದರೆ ಇತರೆ ದೇಶಗಳು ಅವರೊಂದಿಗೆ ವ್ಯಾಪಾರ-ವಹಿವಾಟು ನಡೆಸಬಾರದು ಎಂಬುದು ಟ್ರಂಪ್ ಉದ್ದೇಶ. ಆದರೆ, ಇದನ್ನೂ ಮೀರಿ ಭಾರತ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿರುವುದು ಟ್ರಂಪ್ ಸುಂಕ ಸಮರ ಮತ್ತು ಹೆಚ್ಚುವರಿ ದಂಡಕ್ಕೆ ಕಾರಣವಾಗಿದೆ,(ಏಜೆನ್ಸೀಸ್).