ಕಾಶಿ ದರ್ಶನ ಪ್ರವಾಸ 9 ದಿನಗಳಿಗೆ ಹೆಚ್ಚಿಸಿದ ಸರ್ಕಾರ

railway
Published on


ಬೆಂಗಳೂರು: ‘‘ಕರ್ನಾಟಕ ಭಾರತ ಗೌರವ ಕಾಶಿ ದರ್ಶನ’ ರೈಲು ಯಾತ್ರೆಯ ಮೂಲಕ ತೆರಳುವ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್-ರಾಜ್ ಕ್ಷೇತ್ರಗಳ ಪ್ಯಾಕೇಜ್ ಯಾತ್ರೆಯಲ್ಲಿ ಈ ಬಾರಿ ಬಿಹಾರದ ಗಯಾ ಕ್ಷೇತ್ರದ ದರ್ಶನ ಸೇರ್ಪಡೆಗೊಳಿಸಿ, ೮ ದಿನಗಳ ಪ್ರವಾಸವನ್ನು ೯ ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಈ ಯೋಜನೆಗೆ ಸರ್ಕಾರದಿಂದ ನೀಡಲಾಗುವ ಸಹಾಯಧನ ಮೊತ್ತವನ್ನು ೫೦೦೦ ರೂ. ನಿಂದ ೭೫೦೦ ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಯೋಜನೆಯಲ್ಲಿ ಹೊಸದಾಗಿ ಎಲ್‌ಎಚ್‌ಬಿ ಕೋಚ್‌ಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ ಸುಸಜ್ಜಿತವಾದ ಅಡುಗೆ ಕೋಣೆ ಹಾಗೂ ಇಬ್ಬರು ವೈದ್ಯರು ಸಹ ಯಾತ್ರಾರ್ಥಿಗಳ ಜತೆಯಲ್ಲಿ ಸೇವಾ ನಿರತರಾಗಿರುತ್ತಾರೆ. ಆಗಸ್ಟ್‌ನಲ್ಲಿ ಹೊರಡಲಿರುವ ೫ನೇ ಟ್ರಿಪ್ ಇದಾಗಿದ್ದು, ಆ.೨೯ ರಂದು ನಿರ್ಗಮನವಾಗಿ ಸೆ.೬ ರಂದು ಆಗಮನವಾಗಿದೆ. ಇದೇ ರೀತಿ ಸೆಪ್ಟೆಂಬರ್‌ನಲ್ಲಿ ಹೊರಡಲಿರುವ ೬ನೇ ಟ್ರಿಪ್ ಸೆ.೨೩ ರಂದು ನಿರ್ಗಮನವಾಗಿ ಅ. ೨ ರಂದು ಆಗಮನವಾಗಲಿದೆ. ಈ ಯಾತ್ರೆಗೆ ತುಮಕೂರಿನಲ್ಲಿ ಬೋರ್ಡಿಂಗ್ ಮತ್ತು ಡಿ-ಬೋರ್ಡಿಂಗ್ ವ್ಯವಸ್ಥೆಯನ್ನು ಹೊಸದಾಗಿ ಕಲ್ಪಿಸಲಾಗಿರುತ್ತದೆ ಎಂದು ಹೇಳಿದ್ದಾರೆ.

ಅಯೋಧ್ಯೆಗೆ ಭೇಟಿ ನೀಡುವ ರಾಜ್ಯದ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ಭವನ ವಸತಿ ಸಂಕೀರ್ಣ ನಿರ್ಮಾಣ ಮಾಡಲು ಉತ್ತರ ಪ್ರದೇಶದ ಮುಖ್ಯಮಂತ್ರಿಯವರಿಗೆ ಸುಮಾರು ೫ ಎಕರೆ ಭೂಮಿ ಮಂಜೂರು ಮಾಡುವಂತೆ ಪತ್ರ ಬರೆದು ಕೋರಲಾಗುವುದು ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಮುಜರಾಯಿ ಇಲಾಖೆ ಅವರ ಸಮನ್ವಯ ಸಾಧಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ರಾಜ್ಯದ ದೇವಸ್ಥಾನಗಳ ಪೂಜಾ ಕಾರ್ಯ ಇತ್ಯಾದಿಗಳ ಕೆಲಸಕ್ಕೆಂದು ಸರ್ಕಾರ ಬಿಡುಗಡೆ ಮಾಡುವ ತಸ್ತಿಕ್ ಹಣವನ್ನು ನೇರವಾಗಿ ಅರ್ಚಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net