ಎಫ್‌ಬಿಐ ನಿರ್ದೇಶಕರಾಗಿ ಕಾಶ್ ಪಟೇಲ್ ಪದಗ್ರಹಣ; ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕಾರ | Kash Patel

Untitled design (16) (1)
Published on

ವಾಷಿಂಗ್ಟನ್​ಡಿಸಿ: ಭಾರತೀಯ ಮೂಲದ ಅಮೆರಿಕನ್ ಕಾಶ್ ಪಟೇಲ್( Kash Patel) ಅವರನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ-FBI)ನ ಹೊಸ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಈ ನೇಮಕಾತಿಯನ್ನು ಅಮೆರಿಕ ಸೆನೆಟ್ 51–49 ಮತಗಳಿಂದ ಅನುಮೋದಿಸಿತು. ಕಶ್ಯಪ್ ಪ್ರಮೋದ್ ವಿನೋದ್ ಪಟೇಲ್ ಅವರನ್ನು ’ಕಾಶ್ ಪಟೇಲ್’ ಎಂದು ಕರೆಯಲಾಗುತ್ತದೆ.

ಕ್ರಿಸ್ಟೋಫರ್ ವ್ರೇ ಅವರ ನಂತರ ಒಂಬತ್ತನೇ ಎಫ್‌ಬಿಐ ನಿರ್ದೇಶಕರಾಗಿ ಕಾಶ್ ಪಟೇಲ್ ಅವರು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ನಿರ್ದೇಶಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಾಷಿಂಗ್ಟನ್ ಡಿಸಿಯ ಶ್ವೇತಭವನದ ಸಂಕೀರ್ಣದಲ್ಲಿರುವ ಐಸೆನ್‌ಹೋವರ್ ಕಾರ್ಯನಿರ್ವಾಹಕ ಕಚೇರಿ ಕಟ್ಟಡದಲ್ಲಿ ಅಮೆರಿಕದ ಅಟಾರ್ನಿ ಜನರಲ್ ಪ್ಯಾಮ್ ಬೋಂಡಿ ಅವರು ಪ್ರಮಾಣ ವಚನ ಬೋಧಿಸಿದರು ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಕಾಶ್​ ಪಟೇಲ್​ ಅವರು ಭಾರತದ ಪವಿತ್ರ ಗ್ರಂಥ ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಓದುವಾಗ ಕಾಶ್ ಪಟೇಲ್ ಅವರ ಕುಟುಂಬವು ಅವರ ಪಕ್ಕದಲ್ಲಿ ನಿಂತಿತ್ತು. ಇತರ ಕುಟುಂಬ ಸದಸ್ಯರು ಮುಂದಿನ ಸಾಲಿನಲ್ಲಿ ಕುಳಿತಿದ್ದರು.

ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾತನಾಡಿದ ಕಾಶ್​ ಪಟೇಲ್​​, ನಾನು ಅಮೇರಿಕನ್ ಕನಸನ್ನು ಜೀವಿಸುತ್ತಿದ್ದೇನೆ. ನೀವು ಭೂಮಿಯ ಮೇಲಿನ ಶ್ರೇಷ್ಠ ರಾಷ್ಟ್ರದ ಕಾನೂನು ಜಾರಿ ಸಂಸ್ಥೆಯನ್ನು ಮುನ್ನಡೆಸಲಿರುವ ಮೊದಲ ತಲೆಮಾರಿನ ಭಾರತೀಯರೊಂದಿಗೆ ಮಾತನಾಡುತ್ತಿದ್ದೀರಿ. ಇದು ಬೇರೆಲ್ಲಿಯೂ ಸಂಭವಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾಶ್ ಪಟೇಲ್ ನ್ಯೂಯಾರ್ಕ್‌ನಲ್ಲಿ ಗುಜರಾತಿ ವಲಸೆ ಕುಟುಂಬದಲ್ಲಿ ಜನಿಸಿದರು. ಅವರು 1980ರಲ್ಲಿ ಪೂರ್ವ ಆಫ್ರಿಕಾದಿಂದ ನ್ಯೂಯಾರ್ಕ್‌ನ ಕ್ವೀನ್ಸ್‌ಗೆ ವಲಸೆ ಬಂದಿದ್ದರು. ಅವರ ಕುಟುಂಬ ಮೂಲತಃ ವಡೋದರಾದವರು. ಆದರೆ ಪಾಲಕರು ಉಗಾಂಡಾದಲ್ಲಿ ವಾಸಿಸುತ್ತಿದ್ದರು. ಪಟೇಲ್ ಕಾನೂನು ಪದವಿ ಪಡೆದಿದ್ದು, ಫ್ಲೋರಿಡಾದಲ್ಲಿ ಸಾರ್ವಜನಿಕ ರಕ್ಷಕರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಇಲ್ಲಿ ಅವರು ರಾಜ್ಯ ಮತ್ತು ಫೆಡರಲ್ ನ್ಯಾಯಾಲಯಗಳಲ್ಲಿ ಜನರನ್ನು ಪ್ರತಿನಿಧಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net