

ಬೆಂಗಳೂರು: 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ 'ಎ' ಮತ್ತು 'ಬಿ' ವೃಂದದ 384 ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಯ ಹೊಸ ದಿನಾಂಕವನ್ನು ಕೆಪಿಎಸ್ಸಿ ಶ್ರೀದಲ್ಲೇ ಪ್ರಕಟಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
'ಪೂರ್ವಭಾವಿ ಪರೀಕ್ಷೆಯನ್ನು ಕೆಪಿಎಸ್ಸಿ ಆ.25ರಂದು ನಡೆಸಲು ನಿರ್ಧರಿಸಿತ್ತು. ಅಂದು ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು (ಐಬಿಪಿಎಸ್) ಗುಮಾಸ್ತ ಹುದ್ದೆಗಳಿಗೆ ಪರೀಕ್ಷೆ ನಡೆಸಲಿದೆ. ಈ ಬಗ್ಗೆ ಕೆಪಿಎಸ್ಸಿ ಜತೆಗೆ ಚರ್ಚಿಸಿದ್ದು, ಐಬಿಪಿಎಸ್ ಪರೀಕ್ಷಾರ್ಥಿಗಳ ಹಿತದೃಷ್ಟಿಯಿಂದ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯನ್ನು ಮುಂದೂಡುವಂತೆ ಸಲಹೆ ನೀಡಿರುವ ಕುರಿತು' ಎಕ್ಸ್ ಖಾತೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದಾರೆ.
ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಗೆ ಅಗತ್ಯ ಸಿದ್ಧತೆಗಳು ಆಗಿರುವ ಹಿನ್ನೆಲೆಯಲ್ಲಿ ಆಗಸ್ಟ್ನಲ್ಲಿಯೇ ಬೇರೊಂದು ದಿನ ಪರೀಕ್ಷೆ ನಡೆಸುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.