ಕರೂರು ಕಾಲ್ತುಳಿತ ದುರಂತ: ಹೈಕೋರ್ಟ್ ಕದ ತಟ್ಟಿದ ಟಿವಿಕೆ ಮುಖ್ಯಸ್ಥ, ನಟ ದಳಪತಿ ವಿಜಯ್; ಯಾಕೆ ಗೊತ್ತಾ?| Thalapathy Vijay

Untitled design - 2025-09-28T135303.677
Published on

Thalapathy Vijay: ತಮಿಳುನಾಡಿನ ಕರೂರಿ​ನಲ್ಲಿ ತಮ್ಮ ರಾಜಕೀಯ ರ್ಯಾಲಿಯಲ್ಲಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಟಿವಿಕೆ ಮುಖ್ಯಸ್ಥ ಮತ್ತು ಸೂಪರ್ ಸ್ಟಾರ್ ದಳಪತಿ ವಿಜಯ್ ಮದ್ರಾಸ್ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ ಎಂದು ಭಾನುವಾರ(ಸೆ. 28) ವರದಿಯಾಗಿದೆ.

ನಿನ್ನೆಯ ಕಾಲ್ತುಳಿತದಲ್ಲಿ 39 ಮಂದಿ ಸಾವನ್ನಪ್ಪಿ, ನೂರಾರು ಜನ ಗಾಯಗೊಂಡ ಘಟನೆಯ ಹಿಂದೆ ತಮಿಳುನಾಡಿನ ಆಡಳಿತರೂಢ ಡಿಎಂಕೆ ಪಕ್ಷದ ಪಿತೂರಿಗೆ ಇದೆ ಎಂದು ದಳಪತಿ ವಿಜಯ್ ಅವರ ಪಕ್ಷ ತಮಿಳಗಂ ವೆಟ್ರಿ ಕಳಗಂ(ಟಿವಿಕೆ) ಪಕ್ಷ ಆರೋಪಿಸಿದೆ.

ಘಟನೆ ಬಗ್ಗೆ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ನೇಮಿಸಬೇಕು ಅಥವಾ ಕೇಂದ್ರದ ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ದಳಪತಿ ವಿಜಯ್ ಮದ್ರಾಸ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ನಾಳೆ ಸೋಮವಾರ(ಸೆ. 29) ವಿಜಯ್ ಅರ್ಜಿ ವಿಚಾರಣೆ ನಡೆಯಲಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಈ ಕುರಿತು ಮಾತನಾಡಿರುವ ವಿವಿಕೆ ಪಕ್ಷದ ವಕೀಲ ಅರಿವಳಗನ್, ಕರೂರಿನಲ್ಲಿ ನಡೆದ ಘಟನೆಯ ಹಿಂದೆ ಕ್ರಿಮಿನಲ್ ಪಿತೂರಿ ಇದೆ. ಆದ್ದರಿಂದ ನಾವು ರಾಜ್ಯ ಸಂಸ್ಥೆಯ ಮೂಲಕ ತನಿಖೆ ಮಾಡೋದು ಬೇಡ,  ಸ್ವತಂತ್ರ ಸಂಸ್ಥೆ ಮೂಲಕ ತನಿಖೆ ಕೋರಿ ಅರ್ಜಿ ಸಲ್ಲಿಸಿದ್ದೇವೆ. ನ್ಯಾಯಾಲಯವೇ ವಿಶೇಷ ತನಿಖಾ ತಂಡವನ್ನು ರಚಿಸಬೇಕು. ಇಲ್ಲದಿದ್ದರೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಹೇಳಿದ್ದಾರೆ.

ಸ್ಥಳೀಯ ಜನರಿಂದ ನಮಗೆ ಘಟನೆ ಹಿಂದೆ ಕ್ರಿಮಿನಲ್ ಪಿತೂರಿ ನಡೆದಿರೋದು ತಿಳಿದು ಬಂದಿದೆ. ನಮ್ಮ ಬಳಿ ಕೆಲವು ಸಿಸಿಟಿವಿ ದೃಶ್ಯಗಳಿವೆ. ಕರೂರ್​ನ ಆಡಳಿತ ಪಕ್ಷದ ಪದಾಧಿಕಾರಿಗಳು ಈ ಪಿತೂರಿ ಹಿಂದೆ ಇರುವುದನ್ನು ತೋರಿಸುತ್ತದೆ. ನಾವು ಪೊಲೀಸರು ವಿಧಿಸಿರುವ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿಲ್ಲ, ಉಲ್ಲಂಘಿಸಿಲ್ಲ. ಕಳೆದ ಎರಡು ತಿಂಗಳುಗಳಲ್ಲಿ ಮಧುರೈ, ತಿರುಚ್ಚಿ, ಅರಿಯಲೂರು, ತಿರುವರೂರು, ನಾಗಪಟ್ಟಣಂ ಮತ್ತು ನಾಮಕ್ಕಲ್‌ನಲ್ಲಿ ಟಿವಿಕೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿದೆ. ಅಲ್ಲೆಲ್ಲೂ ಕಾಲ್ತುಳಿತ ನಡೆದಿದಲ್ಲ, ಕರೂರ್​ನಲ್ಲಿ ಮಾತ್ರ ಹೇಗೆ? ಸಂಭವಿಸಿತು. ಈ ಬಗ್ಗೆ ನಮಗೆ ಅನುಮಾನವಿದೆ ಎಂದು ತಿಳಿಸಿದ್ದಾರೆ.

ಕಾಲ್ತುಳಿತ ಘಟನೆ ಬಗ್ಗೆ ತಮಿಳುನಾಡು ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಿದೆ. ಅದರ ವರದಿ ಆಧಾರದ ಮೇಲೆ ಮುಂದಿನ ಕ್ರಮಕೈಗೊಳ್ಳುವುದಾಗಿ ಸಿಎಂ ಸ್ಟಾಲಿನ್ ಹೇಳಿದ್ದಾರೆ. (ಏಜೆನ್ಸೀಸ್) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net