Karur stampede | ಎಸ್​​ಐಟಿಯಿಂದ ನಟ ವಿಜಯ್​ ಪ್ರಚಾರದ ಬಸ್​​ ವಶಪಡಿಸಿಕೊಳ್ಳುವ ಸಾಧ್ಯತೆ

Vijay
Published on

Karur stampede: ಇತ್ತೀಚೆಗೆ ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ರ‍್ಯಾಲಿಯ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ, ನಟ, ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ವಿಜಯ್ ಬಳಸಿದ್ದ ಬಸ್ಸನ್ನು ಮದ್ರಾಸ್ ಹೈಕೋರ್ಟ್ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಪಡಿಸಿಕೊಳ್ಳಲಿದೆ ಎಂದು ವರದಿಯಾಗಿದೆ.

ಘಟನೆಗೆ ಸಂಬಂಧಪಟ್ಟಂತೆ ತನಿಖೆಯ ಭಾಗವಾಗಿ ಬಸ್ಸಿನ ಒಳಗೆ ಮತ್ತು ಸುತ್ತಮುತ್ತಲಿನ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಅಪಘಾತ ನಡೆದ ಸ್ಥಳದ ದೃಶ್ಯಗಳನ್ನು ಸಂಗ್ರಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಉತ್ತರ ವಲಯದ ಪೊಲೀಸ್ ಮಹಾನಿರ್ದೇಶಕ ಆಸ್ರಾ ಗರ್ಗ್, ಎಸ್‌ಐಟಿಯ ನೇತೃತ್ವ ವಹಿಸಲಿದ್ದು, ಈ ತಂಡದಲ್ಲಿ ನಮಕ್ಕಲ್ ಪೊಲೀಸ್ ವರಿಷ್ಠಾಧಿಕಾರಿ ವಿಮಲಾ ಮತ್ತು ಸಿಎಸ್‌ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ಶ್ಯಾಮಲಾದೇವಿ ಕೂಡ ಇರಲಿದ್ದಾರೆ, ದುರಂತಕ್ಕೆ ಕಾರಣವಾದ ಲೋಪಗಳನ್ನು ಪತ್ತೆ ಮಾಡಲು ಟಿವಿಕೆ ಸಂಘಟಕರು, ಪಕ್ಷದ ಮುಖಂಡರು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಕಿಡಿ ಕಾರಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ ನಿರೀಕ್ಷಣಾ ಜಾಮೀನಿಗೆ ಮನವಿ ಸಲ್ಲಿಸಿದ್ದ ಪಕ್ಷದ ಇಬ್ಬರು ಹಿರಿಯ ನಾಯಕರ ಅರ್ಜಿಗಳನ್ನು ನ್ಯಾಯಾಲಯ ನಿರಾಕರಿಸಿದೆ.

ಚಿಕ್ಕ ಮಕ್ಕಳು ಸೇರಿದಂತೆ ಅನೇಕರು ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದು, ಈ ವಿಷಯವಾಗಿ ಸಂಬಂಧಪಟ್ಟವರು ತಮ್ಮ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎನ್ನುವುದು ನ್ಯಾಯಾಲಯದ ನಿರ್ದೇಶನಗಳ ಉಲ್ಲೇಖವಾಗಿದೆ. ಈಗಾಗಲೇ ಬಂಧನಕ್ಕೀಡಾಗಿರುವ ಸ್ಥಳೀಯ ಟಿವಿಕೆ ನಾಯಕ ಮತ್ತು ಇತರ ಕಾರ್ಯಕರ್ತರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 105 (ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆ), 110 (ಅಪರಾಧಿ ನರಹತ್ಯೆ ಮಾಡಲು ಪ್ರಯತ್ನ), 125 (ಇತರರ ಜೀವಕ್ಕೆ ಅಪಾಯವನ್ನುಂಟುಮಾಡುವುದು) ಮತ್ತು 223 (ಆದೇಶಕ್ಕೆ ಅವಿಧೇಯತೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದುರಂತದ ಕುರಿತಾಗಿ ರಾಜಕೀಯ ಟೀಕೆ ಟಿಪ್ಪಣಿಗಳು ಜೋರಾಗಿದ್ದು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಬಿಜೆಪಿ ಮತ್ತು ಕೇಂದ್ರ ಸರ್ಕಾರ ಸಂತ್ರಸ್ತರ ಬಗ್ಗೆ ನೈಜ ಕಾಳಜಿ ತೋರದೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ ಗಳಿಸಲು ಇದನ್ನು ಬಳಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದೇ ವಿಷಯವಾಗಿ ಟಿವಿಕೆ ಮುಖ್ಯಸ್ಥ ವಿಜಯ್​ರನ್ನು ತರಾಟೆಗೆ ತೆಗೆದುಕೊಂಡಿರುವ ಡಿಎಂಕೆ, ಸಿನಿಮಾ ಕ್ಷೇತ್ರದಲ್ಲಿ ಬಹಳ ಹಿಂದೆಯೇ ವಿಫಲವಾಗಿದ್ದ ವಿಜಯ್ ಅವರ ನಟನಾ ಕೌಶಲ್ಯ, ನಿಜ ಜೀವನದಲ್ಲೂ ಯಶಸ್ವಿಯಾಗುವುದಿಲ್ಲ ಎಂದು ಅದು ಹೇಳಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net