ಕಿಕ್ಕೇರಿ: ಹೋಬಳಿಯ ಸಾಸಲು ಗ್ರಾಮದಲ್ಲಿ ಕಾರ್ತಿಕ ಮಾಸದ ಸೋಮವಾರದ ಪೂಜೆ ಶ್ರದ್ಧಾ ಭಕ್ತಿಯಿಂದ ಜರುಗಿತು.
ಹೋಬಳಿ ಅಲ್ಲದೆ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಬೆಳಗಿನ ಜಾವ ಪವಿತ್ರ ಸೋಮೇಶ್ವರ ಪುಷ್ಕರಿಣಿಯಲ್ಲಿ ಪುಣ್ಯಸ್ನಾನ ಮಾಡಿದರು. ಸರತಿಯಲ್ಲಿ ನಿಂತು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿರುವ ಸೋಮೇಶ್ವರ, ಶಂಭುಲಿಂಗೇಶ್ವರ ಮೂರ್ತಿ ಹಾಗೂ ಗ್ರಾಮದಲ್ಲಿರುವ ಸಹೋದರಿ ಕುದುರೆಮಂಡಮ್ಮ ದೇವಿ ದರ್ಶನ ಪಡೆದರು.
ಶಂಭುಲಿಂಗೇಶ್ವರ ದೇಗುಲ ಆವರಣದಲ್ಲಿರುವ ನಾಗಬನಕ್ಕೆ ಭಕ್ತರು ತೆರಳಿ ಹುತ್ತಕ್ಕೆ ಅರಿಶಿಣ
, ಹಾಲು, ಮೊಸರು ಅಭಿಷೇಕ ನೆರವೇರಿಸಿ, ಪುಷ್ಪಗಳಿಂದ ಅಲಂಕರಿಸಿದರು. ರೋಗರುಜಿನ, ಚರ್ಮವ್ಯಾಧಿ ಕಾಯಿಲೆ ಬಾರದಂತೆ ಪ್ರಾರ್ಥಿಸಿದರು.
ಶಂಭುಲಿಂಗೇಶ್ವರ, ಸೋಮೇಶ್ವರ ಅನ್ನದಾಸೋಹ ಸಮಿತಿಯವರು ದಾನಿಗಳ ಸಹಕಾರದಿಂದ ಅನ್ನದಾಸೋಹ ಏರ್ಪಡಿಸಲಾಗಿತ್ತು.
ದೇಗುಲ ನವೀಕರಣ ನೆಪದಲ್ಲಿ 3ವರ್ಷ ಕಳೆಯುತ್ತ ಬಂದರೂ ದೇಗುಲ ನಿರ್ಮಾಣ ಪೂರ್ಣವಾಗಿಲ್ಲ. ದೇಗುಲ ಹೊರ ಆವರಣದಲ್ಲಿ ಬಾಲಾಲಯದಲ್ಲಿ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ಮೂಲ ಸೌಲಭ್ಯವಿಲ್ಲ. ನಾಯಿಗಳ ಹಿಂಡು ನಾಗಬನಕ್ಕೆ ನುಗ್ಗಿ ಭಕ್ತರನ್ನು ಗದರಿಸುತ್ತಿವೆ. ಮುಜರಾಯಿ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸುವುದನ್ನು ಮರೆತಂತಿದೆ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದರು.