

ಬೆಂಗಳೂರು: ಹಣಕಾಸಿನ ವಿಚಾರ ಹಾಗೂ ಹಳೇ ದ್ವೇಷಕ್ಕೆ ರಿಯಲ್ ಎಸ್ಟೇಟ್ ಉದ್ಯಮಿಯನ್ನು ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಸವಾಡಿ ಠಾಣೆ ಪೊಲೀಸರು 9ಮಂದಿಯನ್ನು ಬಂಧಿಸಿದ್ದಾರೆ.
ಬಾಣಸವಾಡಿಯ ಧರ್ಮ, ಇಶಾಕ್, ಸುಲ್ತಾನ್, ಗೋಕುಲ್, ಬಸವರಾಜು, ಜಾನ್ ಡೇವಿಡ್, ಸೀನಾ, ಪವನ್ ಮತ್ತು ಅರಸು ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ್ ಅಲಿಯಾಸ್ ಮಂಜನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಮೇ ೭ರಂದು ಕಾರ್ತಿಕೇಯನ್(೪೦) ಎಂಬಾತನನ್ನು ಹತ್ಯೆಗೈದಿದ್ದರು.
ತಲೆಮರೆಸಿಕೊಂಡಿರುವ ಮಂಜುನಾಥ್ ಅಲಿಯಾಸ್ ಮಂಜು ಮತ್ತು ಇತರೆ ಬಂಧಿತ ಆರೋಪಿಗಳು ಹಾಗೂ ಕೊಲೆಯಾದ ಕಾರ್ತಿಕೇಯನ್ ನಡುವೆ ಹಣಕಾಸು ಹಾಗೂ ವೈಯಕ್ತಿಕ ವಿಚಾರಗಳಿಗೆ ಹಳೇ ದ್ವೇಷವಿತ್ತು. ಹೀಗಾಗಿ ಕಾರ್ತಿಕೇಯನ್‌ನನ್ನು ಹತ್ಯೆ ಮಾಡಿದ್ದಾರೆ. ಆರೋಪಿಗಳ ಪೈಕಿ ಧರ್ಮ, ಜಾನ್ ಡೇವಿಡ್ ಮತ್ತು ಸೀನಾ ಬಾಣಸವಾಡಿ ಠಾಣೆಯ ರೌಡಿಶೀಟರ್‌ಗಳಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೇ ೭ರಂದು ರಾತ್ರಿ ೭ ಗಂಟೆ ಸುಮಾರಿಗೆ ಕಾರ್ತಿಕೇಯನ್ ಮನೆ ಸಮೀಪದಲ್ಲಿ ವಾಯುವಿಹಾರ ನಡೆಸುತ್ತಿದ್ದ. ಈ ಸಂದರ್ಭದಲ್ಲಿ ನಾಲ್ಕೈದು ಬೈಕ್‌ಗಳಲ್ಲಿ ಬಂದ ಹಂತಕರು ಕಾರ್ತಿಕೇಯನ್ ಮೇಲೆ ದಾಳಿ ನಡೆಸಿ, ಮನಸೋ ಇಚ್ಚೆ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಕೊಲೆಯಾದ ಕಾರ್ತಿಕೇಯನ್ ವಿರುದ್ಧ ಈ ಹಿಂದೆ ಬಾಣಸವಾಡಿ ಮತ್ತು ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ರೌಡಿಪಟ್ಟಿ ತೆರೆಯಲಾಗಿತ್ತು. ಎರಡು ವರ್ಷಗಳ ಹಿಂದೆ ಕೋರ್ಟ್ ಮೂಲಕ ಕಾರ್ತಿಕೇಯನ್ ಅದನ್ನು ರದ್ದು ಪಡಿಸಿಕೊಂಡಿದ್ದ. ಬಳಿಕ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿಕೊಂಡು ಜೀವನ ನಡೆಸುತ್ತಿದ್ದ. ಇತ್ತೀಚೆಗೆ ಕೆಲ ವಿವಾದಿತ ಜಾಗಗಳಿಗೆ ಬೇಲಿ ಹಾಕಿಕೊಂಡಿದ್ದ ಕಾರ್ತಿಕೇಯನ್, ಆರೋಪಿ ಮಂಜು ಮತ್ತು ತಂಡದ ಜತೆ ಜಗಳ ಮಾಡಿಕೊಂಡಿದ್ದ. ಅಲ್ಲದೆ, ಗನ್ ತೋರಿಸಿ ಮಂಜುಗೆ ಬೆದರಿಕೆ ಹಾಕಿದ್ದ. ಈ ಹಿನ್ನೆಲೆಯಲ್ಲಿ ಕಾರ್ತಿಕೇಯನ್‌ನನ್ನು ಹತ್ಯೆಗೈಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ತಿಕೇಯನ್ ಹತ್ಯೆ ಪ್ರಕರಣ, 9 ಮಂದಿಯ ಸೆರೆ