

ಬೆಂಗಳೂರು : ಶಿಕ್ಷಕರ ನೇಮಕಾತಿಗೆ ಅರ್ಹತೆ ಪಡೆಯಲು ನಡೆಸುವ 2021 ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಕೆಎಆರ್ಟಿಇಟಿ) ಆಗಸ್ಟ್ 22 ರಂದು ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಇಲಾಖೆಯ ವೆಬ್-ಸೈಟ್ ಮೂಲಕ ಶುಕ್ರವಾರದಿಂದಲೇ ಅರ್ಜಿ ಸಲ್ಲಿಸಬಹುದಾಗಿದ್ದು, ಜುಲೈ 20 ಕೊನೆಯ ದಿನವಾಗಿದೆ.
1 ರಿಂದ 5 ನೇ ತರಗತಿ ಶಿಕ್ಷಕರಾಗಲು ಟಿಇಟಿಗೆ ಅರ್ಜಿ ಸಲ್ಲಿಸುವವರು ಪಿಯುಸಿ ಹಾಗೂ ಡಿ.ಇಡಿ., ಉತ್ತೀರ್ಣರಾಗಿರಬೇಕು ಹಾಗೂ 6 ರಿಂದ 8 ನೇ ತರಗತಿ ಶಿಕ್ಷಕರಾಗಲು ಅರ್ಜಿ ಸಲ್ಲಿಸುವವರು ಪದವಿ ಮತ್ತು ಡಿ.ಇಡಿ., ಅಥವಾ ಪದವಿಯೊಂದಿಗೆ ಬಿಇಡಿ ಅಥವಾ ಬಿ.ಎ.ಇಡಿ, ಬಿ.ಎಸ್ಸಿ.ಇಡಿ ಯಲ್ಲಿ ಉತ್ತೀರ್ಣರಾಗಿರಬೇಕು. ಕೊನೆಯ ವರ್ಷಗಳ ಡಿಇಡಿ, ಬಿಇಡಿ, ಬಿಎಇಡಿ, ಬಿಎಸ್ಸಿ.ಇಡಿ. ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವವರೂ ಸಹ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಈ ವೆಬ್ಸೈಟ್ ಅಡ್ರೆಸ್ https://sts.karnataka.gov.in/TET/ ಬಳಸಬಹುದು.
ಆ. 22 ರಂದು ಬೆಳಗ್ಗೆ 9.30 ರಿಂದ 12 ಗಂಟೆ ಮತ್ತು ಮಧ್ಯಾಹ್ನ 2 ಗಂಟೆಯಿಂದ 4.30 ರವರೆಗೆ ಪರೀಕ್ಷೆಗಳು ನಡೆಯಲಿವೆ. ಪತ್ರಿಕೆ 150 ಅಂಕಗಳನ್ನು ಹೊಂದಿರುತ್ತವೆ. ಪ್ರವೇಶ ಪತ್ರಗಳನ್ನು ದಿನಾಂಕ ಆ. 12 ರಿಂದ ಆನ್ ಲೈನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರವು ಜೀವಿತಾವಧಿಯವರೆಗೆ ಮಾನ್ಯತೆ ಹೊಂದಿರುತ್ತದೆ. ಹೆಚ್ಚಿನ ಸಂಖ್ಯೆಯ ಅರ್ಹ ಅಭ್ಯರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.