

| ಮೃತ್ಯುಂಜಯ ಕಪಗಲ್ ಬೆಂಗಳೂರು
ರಾಜ್ಯದ ಚುನಾವಣೆ ರಾಜಕೀಯ ಇತಿಹಾಸದಲ್ಲೇ ಆಗರ್ಭ ಶ್ರೀಮಂತ, ರಿಯಲ್ ಎಸ್ಟೇಟ್ ಉದ್ಯಮಿ ಯೂಸುಫ್ ಶರೀಫ್ ಬಾಬು ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕಿದ್ದಾರೆ. ದಶಕದ ಹಿಂದಿನ ಚುನಾವಣೆಯಲ್ಲಿ ಕೂದಲೆಳೆ ಅಂತರದಲ್ಲಿ ಗೆಲುವು ತಪ್ಪಿಸಿಕೊಂಡಿದ್ದ ಎಚ್.ಎಸ್.ಗೋಪಿನಾಥ್ ರೆಡ್ಡಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಆಡಳಿತ ಪಕ್ಷ ಬಿಜೆಪಿ ಅಭ್ಯರ್ಥಿ. ಸ್ಥಳೀಯ ಸಂಸ್ಥೆಗಳ ಬೆಂಗಳೂರು ನಗರ ಜಿಲ್ಲೆ ವಿಧಾನಪರಿಷತ್ ಕ್ಷೇತ್ರಕ್ಕೆ ಈ ಬಾರಿ ನಡೆಯಲಿರುವ ಚುನಾವಣೆ ಮುಖ್ಯಾಂಶವಿದು. ಪ್ರಸ್ತಾಪಿತ ಎರಡೂ ಕಾರಣಗಳು ರಾಜಕೀಯ ಪಕ್ಷಗಳು, ಆಸಕ್ತರನ್ನು ಕುತೂಹಲದ ತುದಿಗಾಲ ಮೇಲೆ ನಿಲ್ಲಿಸಿವೆ. ವಿಧಾನಸಭೆ ಚುನಾವಣೆ ವೇಳೆ ಸಚಿವ ಎಂ.ಟಿ.ಬಿ.ನಾಗರಾಜ್ ಒಟ್ಟು 1,200 ಕೋಟಿ ರೂ. ಮೊತ್ತದ ಚರ-ಸ್ಥಿರಾಸ್ತಿಯಿದೆ ಎಂದು ಅಫಿಡವಿಟ್ನಲ್ಲಿ ವಿವರಿಸಿದ್ದರು. ಪರಿಷತ್ ಚುನಾವಣೆಗೆ ಕೈ ಪಕ್ಷದ ಉಮೇದುವಾರ ಯೂಸುಫ್ ಷರೀಫ್ ಬಾಬು ಒಟ್ಟು 1,700 ಕೋಟಿ ರೂ. ಮೌಲ್ಯದ ಚರ-ಸ್ಥಿರಾಸ್ತಿ ಘೋಷಿಸಿಕೊಂಡು, ಅತ್ಯಧಿಕ ಶ್ರೀಮಂತರಾಗಿ ಹೊರ ಹೊಮ್ಮಿದ್ದಾರೆ.
ಏಕೈಕ ಶಾಸಕ ಅರ್ಹ!: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 28 ವಿಧಾನಸಭೆ ಕ್ಷೇತ್ರಗಳಿದ್ದರೂ ಆನೇಕಲ್ನ ಕಾಂಗ್ರೆಸ್ ಶಾಸಕ ಬಿ.ಶಿವಣ್ಣ ಮತದಾನಕ್ಕೆ ಅರ್ಹತೆ ಗಿಟ್ಟಿಸಿಕೊಂಡಿ ದ್ದಾರೆ. ಮೂವರು ಸಂಸದರು, 27 ಶಾಸಕರು ಬೆಂಗಳೂರು ನಗರ ವಿಳಾಸ ನಮೂದಿಸಿದ್ದು, ಬಿಬಿಎಂಪಿ ಸಹ ಸದಸ್ಯರಾಗಿದ್ದಾರೆ. ಆದರೆ ಬಿಬಿಎಂಪಿ ಚುನಾಯಿತ ಮಂಡಳಿ ಅವಧಿ ಮುಗಿದಿರುವ ಕಾಪೋರೇಟರ್ಗಳ ಜತೆಗೆ ಸಂಸದ-ಶಾಸಕರು ಮತ ಚಲಾವಣೆ ಹಕ್ಕು ಕಳೆದುಕೊಂಡಿದ್ದಾರೆ.
ಜಿದ್ದಾಜಿದ್ದಿ ಪೈಪೋಟಿ: ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಈವರೆಗೂ ಕಾಂಗ್ರೆಸ್ ಪಾರಮ್ಯ ಮೆರದಿದೆ. 2010 ಮತ್ತು 2016ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ತುರುಸಿನ ಪೈಪೋಟಿವೊಡ್ಡಿದರೂ ಗೆಲುವಿನ ದಡ ಸೇರಲು ಸಾಧ್ಯವಾಗಿಲ್ಲ. ಕೇಂದ್ರ, ರಾಜ್ಯದಲ್ಲಿರುವ ಅಧಿಕಾರದ ವರ್ಚಸ್ಸು ಹಾಗೂ ಸಂಘಟನಾ ಬಲವನ್ನು ಕಮಲ ಪಡೆ ಅಭ್ಯರ್ಥಿ ನೆಚ್ಚಿಕೊಂಡಿದ್ದು, ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ ಎಂದು ಹೇಳಿಕೊಂಡ ಪಕ್ಷದ ನಾಯಕರಿಗೂ ಸತ್ವ ಪರೀಕ್ಷೆ ಎದುರಾಗಿದೆ. ಒಟ್ಟು ಗ್ರಾಪಂ ಸದಸ್ಯರಲ್ಲಿ 455 ಎಸ್ಸಿ, 93 ಎಸ್ಟಿ, 386 ಇತರ ಹಿಂದುಳಿದ ವರ್ಗ ಮತ್ತು 951 ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ. ಹಣ, ಅಧಿಕಾರ ಬಲದೊಂದಿಗೆ ಜಾತಿ, ವರ್ಗವಾರು ಲೆಕ್ಕಾಚಾರದಲ್ಲಿ ಉಭಯ ಪಕ್ಷಗಳು ರಣತಂತ್ರ ಹೆಣೆದಿವೆ. ಕೈಯಲ್ಲಿರುವ ಕ್ಷೇತ್ರ ತಪ್ಪಿಹೋಗದಂತೆ ನೋಡಿಕೊಳ್ಳುವ ಸವಾಲು ಕಾಂಗ್ರೆಸ್ ನಾಯಕರ ಮುಂದಿದ್ದು, ಸಂಘಟನೆಯಲ್ಲಿ ಹುರುಪು ತುಂಬಿ, ಪ್ರತಿಷ್ಠೆ ಪಣಕ್ಕಿಟ್ಟು ಸ್ಪರ್ಧೆ ಎದುರಿಸಲು ಸಜ್ಜಾಗಿದ್ದಾರೆ.
ಅವಕಾಶ ವಂಚಿತರು: ಬೆಂಗಳೂರು ಮಹಾನಗರ ಪಾಲಿಕೆ ಸೇರಿ ಜಿಲ್ಲಾ, ತಾಲೂಕು ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಮುಗಿದಿರುವ ಕಾರಣ ಮತ ಚಲಾವಣೆ ಅವಕಾಶದಿಂದ ವಂಚಿತರು. ಅಲ್ಲದೆ, ಸೀಮಿತ ಸಂಖ್ಯೆಯ ಮತದಾರರ ಮನ ಗೆಲ್ಲಲು ಅಭ್ಯರ್ಥಿಗಳು ಕೊರೆಯುವ ಚಳಿಯಲ್ಲೂ ಬೆವರಿಳಿಸುವಂತಾಗಿದೆ.
2016ರ ಫಲಿತಾಂಶ
ಗ್ರಾಪಂ ಸದಸ್ಯರೇ ನಿರ್ಣಾಯಕರು: ಮತದಾನದ ಹಕ್ಕು ಪಡೆದಿರುವ ಒಟ್ಟು ಮತದಾರರ ಪೈಕಿ 1,885 ಗ್ರಾಪಂ ಸದಸ್ಯರಿದ್ದು, ಕಡಾಕಡಿ ಸೆಣಸಾಟ ನಡೆಸಿರುವ ಉಮೇದುವಾರರ ಭವಿಷ್ಯ ನಿರ್ಣಾಯಕರಾಗಿದ್ದಾರೆ. ಒಟ್ಟು ಸದಸ್ಯರಲ್ಲಿ 931 ಪುರುಷರು, 954 ಮಹಿಳೆಯರಿದ್ದಾರೆ.
ಚಿಂತಕರ ಚಾವಡಿ ಪ್ರವೇಶಿಸಲು ಬಯಸಿರುವ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಬ್ಬರೂ ರಿಯಲ್ ಎಸ್ಟೇಟ್ ಉದ್ಯಮಿಗಳು ಎಂಬ ಸಮಾನ ಅಂಶವಿದೆ. ಬಿಜೆಪಿ ಹುರಿಯಾಳು ಎರಡಂಕಿ ಕೋಟಿ ರೂ.ಗಳ ಚರ-ಸ್ಥಿರಾಸ್ತಿಗೆ ಒಡೆಯರಾಗಿದ್ದಾರೆ. ಪಕ್ಷ ಸಂಘಟನೆ ನೆಲೆಯಿಂದ ಬೆಳೆದು, ಸಾಮಾನ್ಯ ಕಾರ್ಯಕರ್ತರ ಜತೆಗೆ ಗೋಪಿನಾಥ್ ರೆಡ್ಡಿ ನಿಕಟ ಸಂಪರ್ಕವಿಟ್ಟುಕೊಂಡಿದ್ದಾರೆ. ಆದರೆ ಯೂಸುಫ್ ಷರೀಫ್ ಕಾಂಗ್ರೆಸ್ಗೆ ಹೊಸಬ. ನಾಮಪತ್ರ ಸಲ್ಲಿಕೆಗೆ ಒಂದು ದಿನ ಬಾಕಿಯಿರುವಾಗ ಪಕ್ಷದ ಸದಸ್ಯತ್ವದ ಜತೆಗೆ ಬಿ ಫಾಮ್ರ್ ಗಿಟ್ಟಿಸಿಕೊಂಡವರು. ಹಾಲಿ ಸದಸ್ಯ, ವಿಧಾನಪರಿಷತ್ನ ಪ್ರತಿಪಕ್ಷದ ಸಚೇತಕ ಎಂ.ನಾರಾಯಣಸ್ವಾಮಿ ಕೆಳಮನೆಯತ್ತ ಒಲವು ತೋರಿ, ಸ್ಪರ್ಧೆಗೆ ಹಿಂಜರಿದ ಕಾರಣ ಕೈ ನಾಯಕರು ತಲಾಷೆ ನಡೆಸಿ ’ಬಲಾಢ್ಯ’ನನ್ನು ಕಣಕ್ಕೆ ಇಳಿಸಿದ್ದಾರೆ. ನೇರ ಪೈಪೋಟಿ ಏರ್ಪಟ್ಟಿರುವ ಅಖಾಡದಲ್ಲಿ ಹಣ, ಅಧಿಕಾರ ಬಲದ ನಡುವೆ ಫೈಟ್ ನಡೆಯಲಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಚುನಾಯಿತ ಜನಪ್ರತಿನಿಧಿಗಳು ಮತದಾರರಾಗಿದ್ದು, ಹಣದ ಹೊಳೆ ಹರಿಯಲಿದೆ. ಕಳೆದ ಬಾರಿ ಪ್ರತಿ ವೋಟಿಗೆ ಹಲವು ಸಾವಿರ ರೂ.ಗಳು ಕೈಬದಲಾದರೆ, ಈ ಬಾರಿ ಪ್ರತಿ ವೋಟಿನ ಕಿಮ್ಮತ್ತು ಒಂದು ಲಕ್ಷ ರೂ. ದಾಟುವ ಅನುಮಾನವಿದೆ. ಎರಡೂ ಪಕ್ಷಗಳು ಗೆಲುವೊಂದೇ ಮಾನದಂಡ ಮಾಡಿಕೊಂಡು ಅಭ್ಯರ್ಥಿಗಳಿಗೆ ಮಣೆ ಹಾಕಿದ್ದರ ಪರಿಣಾಮ ಹಣದ ಮಾಯಾಜಾಲ ಆವರಿಸಿಕೊಂಡಿದ್ದು, ಅಭಿವೃದ್ಧಿ ಅಜೆಂಡಾ, ಜಾತಿ ಸಮೀಕರಣ ಗೌಣವಾಗುವ ಸಾಧ್ಯತೆಗಳಿವೆ.
ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಚುನಾವಣಾ ಕಣ ರಂಗೇರಿದೆ. ಜಾತಿ, ಹಣ ಮತ್ತು ಜನಬಲ ಆಧಾರದ ಮೇಲೆ ಪಕ್ಷೇತರಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸಲು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಶತಾಯಗತಾಯ ಪ್ರಯತ್ನಿಸಿದ್ದರು. ಆದರೆ, ಅವರ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ಬಿಜೆಪಿ-ಕಾಂಗ್ರೆಸ್ ತಲಾ 20 ಕ್ಷೇತ್ರಗಳಲ್ಲಿ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ.
ಜೆಡಿಎಸ್ಗೆ ಠಕ್ಕರ್: ಜೆಡಿಎಸ್ ಏಳು ಕ್ಷೇತ್ರಗಳಿಗೆ ಟಿಕೆಟ್ ನೀಡಿತ್ತು. ಕುತೂಹಲಕರ ಸಂಗತಿ ಎಂದರೆ ಕೊಡಗಿನಲ್ಲಿ ಜೆಡಿಎಸ್ನಿಂದ ಟಿಕೆಟ್ ಪಡೆದು ನಾಮಪತ್ರ ಸಲ್ಲಿಸಿದ್ದ ಎಚ್.ಯು.ಇಸಾಕ್, ವರಿಷ್ಠರಿಗೆ ಟಕ್ಕರ್ ಕೊಟ್ಟಿದ್ದಾರೆ. ಇಸಾಕ್ ಕೊನೇ ಕ್ಷಣದಲ್ಲಿ ತೆಗೆದುಕೊಂಡ ಈ ತೀರ್ಮಾನ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ. ತಮ್ಮ ಸ್ಪರ್ಧೆಯಿಂದ ಮುಸ್ಲಿಂ ಸಮುದಾಯದ ಮತ ವಿಭಜೆನಯಾಗಿ ಬಿಜೆಪಿಗೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಕಣದಿಂದ ಹಿಂದೆ ಸರಿದರೆಂದು ಹೇಳಲಾಗುತ್ತಿದೆ.
ಬಿಜೆಪಿಗೆ ಬಿಸಿ ತುಪ್ಪ: ಬಿಜೆಪಿಗೆ ಧಾರವಾಡ ಮತ್ತು ಬೆಳಗಾವಿ ಕಬ್ಬಿಣದ ಕಡಲೆಯಾಗಿವೆ. ಬೆಳಗಾವಿಯಲ್ಲಿ ಲಖನ್ ಜಾರಕಿಹೊಳಿ ಮನವೊಲಿ ಸುವಲ್ಲಿ ಬಿಜೆಪಿ ವರಿಷ್ಠರು ವಿಫಲರಾಗಿದ್ದಾರೆ. ಧಾರವಾಡದಲ್ಲಿ ಕೂಡ ಮಲ್ಲಿಕಾರ್ಜುನ ಚನ್ನಪ್ಪರನ್ನು ಕಣದಿಂದ ಹಿಂದೆ ಸರಿಸಲು ಸಾಧ್ಯವಾಗಿಲ್ಲ. ಇದು ಕೂಡ ಬಿಜೆಪಿಗೆ ಮಗ್ಗಲು ಮುಳ್ಳಾಗಿದೆ. ಈ ಚುನಾವಣೆಯಲ್ಲಿ ಒಂದೊಂದು ಮತಗಳು ಮುಖ್ಯವಾಗಿರುವುದರಿಂದ ಮೂರೂ ಪಕ್ಷಗಳು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿವೆ.
20 ಮಂದಿ ವಾಪಸ್: ಮೇಲ್ಮನೆಗೆ ನಾಮಪತ್ರ ಸಲ್ಲಿಸಿದ 20 ಮಂದಿ ಉಮೇದುವಾರಿಕೆ ಹಿಂಪಡೆದಿದ್ದಾರೆ. ನಾಮಪತ್ರ ಹಿಂಪಡೆಯಲು ಶುಕ್ರವಾರ ಕೊನೆಯ ದಿನವಾಗಿತ್ತು. ಅಂತಿಮವಾಗಿ 91 ಮಂದಿ ಕಣದಲ್ಲಿದ್ದಾರೆ. ದಕ್ಷಿಣ ಕನ್ನಡ 4, ಶಿವಮೊಗ್ಗ 2, ಬೆಳಗಾವಿ 3, ವಿಜಯಪುರ 4, ಧಾರವಾಡ 1, ತುಮಕೂರು 1, ಬೆಂಗಳೂರು ನಗರ 1, ರಾಯಚೂರು 1, ಉತ್ತರ ಕನ್ನಡ 1, ಮೈಸೂರು 1 ಹಾಗೂ ಕೊಡಗು ಒಬ್ಬ ವ್ಯಕ್ತಿ ಸೇರಿ 20 ಮಂದಿ ಕಣದಿಂದ ಹಿಂದೆ ಸರಿದಿದ್ದಾರೆ.
ಜೆಡಿಎಸ್ ಒಲವು ಎತ್ತ?: ಜೆಡಿಎಸ್ ಈ ಚುನಾವಣೆಯಲ್ಲಿ ಕೇವಲ ಆರು ಕ್ಷೇತ್ರದಲ್ಲಿ ಮಾತ್ರ ತನ್ನ ಅಭ್ಯರ್ಥಿ ಕಣಕ್ಕಿಳಿಸಿರುವುದರಿಂದ ಉಳಿದೆಡೆ ಯಾವ ಪಕ್ಷವನ್ನು ಬೆಂಬಲಿಸುತ್ತದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಚುನಾವಣೆಯಲ್ಲಿ ಜೆಡಿಎಸ್ ಸಹಕಾರ ಪಡೆಯುವ ಕುರಿತು ಕುಮಾರಸ್ವಾಮಿ ಜತೆ ರ್ಚಚಿಸುವುದಾಗಿ ಹೇಳಿದ್ದಾರೆ. ಈ ನಡುವೆ ಜೆಡಿಎಸ್ ಬಿಜೆಪಿ ಬಿ ಟೀಂ ಎಂದು ಕಾಂಗ್ರೆಸ್ ಹುಯಿಲೆಬ್ಬಿಸಿದೆ. ಹಾಗಾಗಿ ಜೆಡಿಎಸ್ ನಡೆ ಕುತೂಹಲಕಾರಿಯಾಗಿದೆ.
ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡೇ ಬರಬೇಕು ಎಂದು ಬಿಜೆಪಿ ತಾಕೀತು ಮಾಡುತ್ತಿರುವುದರಿಂದ ಕೆಲ ಸಚಿವರು ಹೈರಾಣಾಗಿ ಹೋಗಿದ್ದಾರೆ. ಒಂದಾದ ಮೇಲೊಂದು ಚುನಾವಣೆಗಳು ಎದುರಾಗುತ್ತಿರುವುದು ಮತ್ತು ಅದರ ಜವಬ್ದಾರಿ ಹೊರೆಯನ್ನು ನಮ್ಮ ಮೇಲೆಯೇ ವಹಿಸುತ್ತಿರುವ ಕಾರಣ ಎಲ್ಲವನ್ನೂ ನಿಭಾಯಿಸುವುದು ಸವಾಲಿನ ಕೆಲಸ. ಯಾವ ಚುನಾವಣೆಯೂ ಹಣವಿಲ್ಲದೆ ಮಾಡುವುದು ಕಷ್ಟ. ಪ್ರತಿ ಚುನಾವಣೆಗೆ ಹಣ ಹೊಂದಿಸಬೇಕಾದ ಅನಿವಾರ್ಯತೆ ನಮ್ಮ ಕ್ರೀಯಾಶೀಲತೆಗೆ ಅಡ್ಡಿಯಾಗಿವೆ ಎಂದು ಕೆಲ ಸಚಿವರು ಪಕ್ಷದ ಆಪ್ತ ವಲಯದಲ್ಲಿ ಹೇಳಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಹೆಚ್ಚು ಬಜೆಟ್ ಇಲ್ಲದ ಖಾತೆ ನೀಡಿರುವುದಲ್ಲದೆ, ಅದಕ್ಕೆ ಅನುದಾನವನ್ನು ಸರಿಯಾಗಿ ಕೊಟ್ಟಿಲ್ಲ. ಇದುದ್ದರಲ್ಲಿಯೇ ಬಂಡವಾಳ ಮಾಡಿಕೊಂಡು ಚುನಾವಣೆ ಮಾಡಿ ಎಂದರೆ ಹೇಗೆ ಸಾಧ್ಯ? ಮನೆಯಿಂದ ತಂದು ಹಣ ಹಾಕಿ ಚುನಾವಣೆ ಮಾಡಲು ಸಾಧ್ಯವೇ? ಮುಂಬರಲಿರುವ ವಿಧಾನಸಭೆ ಚುನಾವಣೆಗೆ ನಾವು ಸಿದ್ಧರಾಗಬೇಕಲ್ಲವೇ? ಎನ್ನುವ ಪ್ರಶ್ನೆಗಳನ್ನು ಮುಂದಿಟ್ಟಿರುವ ಕೆಲ ಸಚಿವರು, ಈ ಬಗ್ಗೆ ಸಿಎಂ ಬಳಿಯೂ ದೂರು ಹೇಳಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭರ್ಜರಿ ಅನುದಾನ ಹೊಂದಿರುವ ಇಲಾಖೆಗಳು ಕೆಲವೇ ಪ್ರಭಾವಿ ಸಚಿವರ ಬಳಿ ಇವೆ. ಅವರಿಗೆ ಜವಾಬ್ದಾರಿ ವಹಿಸುವುದು ಸೂಕ್ತ. ಇಲ್ಲದಿದ್ದರೆ ನಮಗೂ ಉತ್ತಮ ಖಾತೆ ನೀಡಿ ಅನುದಾನ ಕೊಡಲಿ. ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದು ತೋರಿಸುತ್ತೇವೆ ಎಂದು ಹೇಳಿಕೊಂಡಿರುವುದು ಪಕ್ಷದಲ್ಲಿ ಮುಜುಗರ ಸನ್ನಿವೇಶಕ್ಕೆ ಕಾರಣವಾಗಿದೆ. ‘ಈಗ ಚುನಾವಣೆ ಜವಾಬ್ದಾರಿ ನಿಭಾಯಿಸುತ್ತಾ ಹೋಗಿ. ನಿಮಗೆ ಹಣಕಾಸು ವ್ಯವಸ್ಥೆಗಳನ್ನು ಮಾಡಲಾಗುವುದು. ಆದರೆ ಈ ವಿಷಯವನ್ನು ಎಲ್ಲಿಯೂ ಬಹಿರಂಗ ಚರ್ಚೆ ಮಾಡುವುದು ಬೇಡ’ ಎಂದು ಪಕ್ಷದ ಮುಖಂಡರು ಕಿವಿಮಾತು ಹೇಳಿರುವ ಕಾರಣ ಸಚಿವರುಗಳು ಕಾದು ನೋಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಮಡಿಕೇರಿ: ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ಗೌಡ ಪರ ಅವರ ತಂದೆ, ಮಾಜಿ ಸಚಿವ ಎ. ಮಂಜು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಮಂಥರ್ಗೌಡ ಗೆಲುವಿಗೆ ತೊಡಕಾಗಬಹುದೆಂಬ ನೆಲೆಗಟ್ಟಿನಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಯು. ಇಸಾಕ್ಖಾನ್ ನಾಮಪತ್ರ ಹಿಂಪಡೆಯುವಂತೆ ಮಾಡುವಲ್ಲಿ ಮಂಜು ಪಾತ್ರ ಹೆಚ್ಚಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಪಿ.ಸಿ. ಹಸೈನಾರ್ ಹಾಜಿ ನಿವಾಸಕ್ಕೆ ಗುರುವಾರ ರಾತ್ರಿ ಭೇಟಿ ನೀಡಿದ್ದ ಎ.ಮಂಜು, ಜೆಡಿಎಸ್ ಅಭ್ಯರ್ಥಿ ನಾಮಪತ್ರ ಹಿಂಪಡೆಯುವಂತೆ ಮಾಡಲು ಒತ್ತಡ ಹೇರಿದ್ದರು ಎನ್ನಲಾಗಿದೆ. ಮುಸ್ಲಿಂ ಪ್ರಭಾವಿ ನಾಯಕರಾಗಿರುವ ಪಿ.ಸಿ. ಹಸೈನಾರ್ ಹಾಜಿ ಕಸರತ್ತು ನಡೆಸುವುದರ ಮೂಲಕ ಜೆಡಿಎಸ್ ಅಭ್ಯರ್ಥಿ ಇಸಾಕ್ ಖಾನ್ ನಾಮಪತ್ರ ಹಿಂಪಡೆಯುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಾ.ರಾ. ಮಹೇಶ್ ಅವರನ್ನೂ ಸಂರ್ಪಸಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಮಗನ ಗೆಲುವಿಗೆ ಅಗತ್ಯವಾದ ರಾಜಕೀಯ ವೇದಿಕೆ ಸಜ್ಜುಗೊಳಿಸುವುದರಲ್ಲಿ ಮಂಜು ತಲ್ಲೀನರಾಗಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಮಾತಿಗೆ ಬೆಲೆಕೊಟ್ಟು ನಾಮಪತ್ರ ಹಿಂಪಡೆದುಕೊಂಡಿದ್ದೇನೆ ಎಂದು ಎಚ್.ಯು.ಇಸಾಕ್ ಖಾನ್ ನಾಮಪತ್ರ ವಾಪಸ್ ಬಳಿಕ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.
ಜೆಡಿಎಸ್ ಜತೆ ಹೊಂದಾಣಿಕೆ ಕುರಿತು ಪಕ್ಷದಲ್ಲಿ ಅಧಿಕೃತ ತೀರ್ಮಾನ ಆಗಿಲ್ಲ. ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಸಾಧ್ಯವಿರುವ ಕಡೆ ಬೆಂಬಲ ಪಡೆಯುವುದಾಗಿ ಮಾತ್ರ ಹೇಳಿದ್ದಾರೆ. ಲಖನ್ ಜಾರಕಿಹೊಳಿ ಅವರೊಂದಿಗೆ ಮಾತನಾಡಿದ್ದೇವೆ. ಪಕ್ಷದ ಅಧಿಕೃತ ಅಭ್ಯರ್ಥಿಗೆ ಸಂಪೂರ್ಣ ಬೆಂಬಲ ಸಿಗಬೇಕು. ತೊಂದರೆ ಆಗಬಾರದೆಂದು ತಿಳಿಸಿದ್ದೇವೆ. ಅವರು ಈ ಬಗ್ಗೆ ರ್ಚಚಿಸಿ, ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
| ಬಸವರಾಜ ಬೊಮ್ಮಾಯಿ ಸಿಎಂ
ಅರ್ಹತೆ ಉಳ್ಳವರೆಲ್ಲ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಬೆಳಗಾವಿ ಕ್ಷೇತ್ರದಲ್ಲಿ ಮಹಾಂತೇಶ ಕವಟಗಿಮಠ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದು, ಲಖನ್ ಜಾರಕಿಹೊಳಿ ಸ್ಪರ್ಧೆಗೂ ಬಿಜೆಪಿಗೂ ಸಂಬಂಧವಿಲ್ಲ. ಅವರ ಸೋದರ ರಮೇಶ್ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕು ಎಂಬ ಹೇಳಿಕೆ ನೀಡಿದ್ದಾರೆ. ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಯಾವ ಕಾರಣಕ್ಕೆ ಬೆಂಗಳೂರಿಗೆ ಬಂದಿದ್ದಾರೋ ಗೊತ್ತಿಲ್ಲ.
| ಗೋವಿಂದ ಕಾರಜೋಳ ಸಚಿವ
ನನ್ನ ಚುನಾವಣೆ, ನನ್ನ ಸೋಲು ಎಲ್ಲವೂ ಮುಗಿದ ಅಧ್ಯಾಯ. ವಿಧಾನಪರಿಷತ್ ಚುನಾವಣೆಯಲ್ಲಿ ಯಾರನ್ನೋ ಗೆಲ್ಲಿಸಲು ನಾವು ಒಳಒಪ್ಪಂದ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ, ಜಾತಿ ಬೆಂಬಲಿಸುವ ಅವಶ್ಯಕತೆಯೂ ಇಲ್ಲ, ಜೆಡಿಎಸ್ ಕೇವಲ ಒಕ್ಕಲಿಗರಿಗಾಗಿ ಇಲ್ಲ. ನಮ್ಮದು ಜಾತ್ಯತೀತ ಜನತಾದಳ, ಎಲ್ಲ ಸಮುದಾಯದವರು ನಮಗೆ ಬೇಕು, ಯಾರ ಮಾತಿಗೂ ಕಿವಿಕೊಡಬೇಡಿ, ನಮ್ಮ ಅಭ್ಯರ್ಥಿ ಪರವಾಗಿ ಮತಚಲಾಯಿಸಿ.
| ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ
ರಾಜಕೀಯ ಬಲಾಬಲದ ಲೆಕ್ಕಾಚಾರದಲ್ಲಿ 6 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಬೆಂಬಲ ಪಡೆಯಲು ಯಡಿಯೂರಪ್ಪ ಉತ್ಸುಕತೆ ತೋರಿದ್ದು, ಬಹಿರಂಗವಾಗಿ ಹೇಳುವ ಮೂಲಕ ಒಳ್ಳೆಯ ರಾಜಕೀಯ ಸಂಸ್ಕೃತಿ ಪ್ರದರ್ಶಿಸಿದ್ದಾರೆ. ಕರೆ ಮಾಡಿಯೂ ಬೆಂಬಲ ಕೋರಿದ್ದಾರೆ. ಆದರೆ, ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿಲ್ಲ.
| ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ