

ನವದೆಹಲಿ: 74ನೇ ಗಣರಾಜ್ಯೋತ್ಸವದಲ್ಲಿ ಕರ್ನಾಟಕ ರಾಜ್ಯದ "ನಾರಿ ಶಕ್ತಿ" ಥೀಮ್ನ ಸ್ತಬ್ಧಚಿತ್ರ ಪ್ರದರ್ಶನವಾಗಿದೆ. ಈ ಮೂಲಕ ಕಳೆದ 14 ವರ್ಷಗಳಿಂದ ನಿರಂತರವಾಗಿ ಪಥಸಂಚಲನದಲ್ಲಿ ಪಾಲ್ಗೊಂಡ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
ಈ ಬಾರಿಯ ರಾಜ್ಯ ಸ್ತಬ್ಧ ಚಿತ್ರದ ಮಹಿಳೆಯರ ಸಾಧನೆಯನ್ನು ದೇಶದ ಮುಂದಿಡುವ ಪ್ರಯತ್ನ ಮಾಡಿದೆ. ಸ್ತಬ್ಧಚಿತ್ರದಲ್ಲಿ ಸಾಲುಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಹಾಲಕ್ಕಿ ಅವರ ಸಾಧನೆಗಳನ್ನು ಪ್ರದರ್ಶಿಸಲಾಗಿದೆ.
ಗಿಡಿ, ಮರ, ಬೆಟ್ಟ-ಗುಡ್ಡಗಳಿಂದ ಸ್ತಬ್ಧ ಚಿತ್ರವನ್ನು ಅಲಂಕಾರಗೊಳಿಸುವ ಮೂಲಕ ರಾಜ್ಯದ ಸಸ್ಯ ಸಂಪತ್ತನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ. ನಾರಿ ಶಕ್ತಿಯನ್ನು ಪ್ರತಿಬಿಂಬಿಸುತ್ತಿರುವುದರಿಂದ ಚನ್ನಪಟ್ಟಣದ ಗೊಂಬೆ ಮಾದರಿಯ ತೊಟ್ಟಿಲು ಚಿತ್ರ ಮತ್ತು ನರಸಮ್ಮನವರು ಮಗುವನ್ನು ಎತ್ತಿಕೊಂಡಿರುವಂತೆ ಚಿತ್ರ ಪ್ರದರ್ಶನಗೊಂಡಿದೆ.
ಈ ಬಗ್ಗೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕದ ಮಹಿಳಾ ಸಾಧಕರ ಪ್ರತೀಕವಾಗಿ ಸೂಲಗಿತ್ತಿ ನರಸಮ್ಮ, ವೃಕ್ಷ ಮಾತೆ ತುಳಸಿ ಗೌಡ ಹಾಲಕ್ಕಿ ಹಾಗೂ ಸಾಲು ಮರದ ತಿಮ್ಮಕ್ಕ ಅವರನ್ನೊಳಗೊಂಡ "ನಾರಿ ಶಕ್ತಿ" ಸ್ತಬ್ಧ ಚಿತ್ರ ನವ ದೆಹಲಿಯ ಕರ್ತವ್ಯ ಪಥದಲ್ಲಿ ವಿಜೃಂಭಿಸಿದೆ ಎಂದು ಬರೆದುಕೊಂಡಿದ್ದಾರೆ.