

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ಕರ್ನಾಟಕ ಪಾರಮ್ಯ ಮೆರೆದಿದ್ದು, ನಿರಂತರವಾಗಿ ಎರಡನೇ ಸ್ಥಾನದಲ್ಲಿ ಮುಂದುವರಿಯುತ್ತಿದೆ.
ಮಹಾರಾಷ್ಟ್ರ ಆರಂಭದಿಂದಲೂ ಮೊದಲ ಸ್ಥಾನ ಕಾಯ್ದುಕೊಂಡಿದ್ದು, ನಂತರ ಸ್ಥಾನದಲ್ಲಿ ಕರ್ನಾಟಕವಿದೆ. ಈ ಮುನ್ನ ಗುಜರಾತ್ ಎರಡನೇ ಸ್ಥಾನದಲ್ಲಿತ್ತು.
ಜುಲೈ ತಿಂಗಳಿನಲ್ಲಿ ದೇಶದ ಒಟ್ಟು ಜಿಎಸ್ಟಿ ಸಂಗ್ರಹ 1,23,026 ಕೋಟಿ ರೂ. ಆಗಿದ್ದು, 2022ರ ಜುಲೈ ತಿಂಗಳಿಗೆ ಹೋಲಿಸಿದರೆ 16 ಸಾವಿರ ಕೋಟಿ ರೂ. ಹೆಚ್ಚಾಗಿದೆ.
2023ರ ಜುಲೈನಲ್ಲಿ ಕರ್ನಾಟಕದ ಜಿಎಸ್ಟಿ ಸಂಗ್ರಹ 11,505 ಕೋಟಿ ರೂ.ಗಳಾಗಿದ್ದರೆ, ಮಹಾರಾಷ್ಟ್ರದ್ದು 26,064 ಕೋಟಿಗಳಾಗಿದೆ. ತಮಿಳುನಾಡು 10022 ಕೋಟಿ ರೂ., ಗುಜರಾತ್ 9787 ಕೋಟಿ ರೂ., ಉತ್ತರ ಪ್ರದೇಶ 8802 ಕೋಟಿ ರೂ., ಹರಿಯಾಣ 7953 ಕೋಟಿ ರೂ.ಗಳಾಗಿದೆ.
2023ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕ ಜಿಎಸ್ಟಿ ಸಂಗ್ರಹ ಗಮನಿಸುವುದಾದರೆ ಮಾರ್ಚ್‌ನಲ್ಲಿ ಏಪ್ರಿಲ್‌ನಲ್ಲಿ 14,593 ಕೋಟಿ ರೂ. ಮೇನಲ್ಲಿ 10,317 ಕೋಟಿ ರೂ., ಜೂನ್‌ನಲ್ಲಿ 11,193 ಕೋಟಿ ರೂ., ಜುಲೈನಲ್ಲಿ 11505 ಕೋಟಿ ರೂ. ಸೇರಿ ನಾಲ್ಕು ತಿಂಗಳಲ್ಲಿ 47,608 ಕೋಟಿ ರೂ. ಸಂಗ್ರಹವಾಗಿದೆ. ಮುಂದಿನ ಎಂಟು ತಿಂಗಳಲ್ಲಿ ಇದೇ ವೇಗದಲ್ಲಿ ಜಿಎಸ್ಟಿ ಸಂಗ್ರಹವಾದರೆ ಒಂದೂವರೆ ಲಕ್ಷ ಕೋಟಿ ರೂ.ವರೆಗೂ ಸಂಗ್ರಹ ಆಗಬಹುದು. 2022ರ ಏಪ್ರಿಲ್‌ನಿಂದ 2023ರ ಮಾರ್ಚ್ ಅಂತ್ಯದ ವರೆಗೆ 1,22,821 ಕೋಟಿ ರೂ. ಸಂಗ್ರಹವಾಗಿತ್ತು. ಅಂದರೆ 2023ರಲ್ಲಿ ಕಳೆದ ಬಾರಿಗಿಂತ 28 ಸಾವಿರ ಕೋಟಿ ರೂ. ಹೆಚ್ಚಿಗೆ ತೆರಿಗೆ ಸಂಗ್ರಹವಾಗಲಿದೆ. ಇದು ಆರ್ಥಿಕ ಚಟುವಟಿಕೆ ವೇಗವಾಗಿ ಬೆಳೆಯುತ್ತಿರುವ ಲಕ್ಷಣವಾಗಿದೆ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.