

| ಸತೀಶ್ ಕೆ.ಬಳ್ಳಾರಿ
ಬೆಂಗಳೂರು: ರೋಗಲಕ್ಷಣಗಳ ಸುಳಿವೇ ನೀಡದಂತೆ ಗುಟ್ಟಾಗಿ ಜನರ ದೇಹ ಸೇರುತ್ತಿದ್ದ ಕರೊನಾ ಸೋಂಕು ಈಗ ಕರೊನಾಪೀಡಿತರ ಸಂಪರ್ಕವೇ ಇಲ್ಲದ ಇತರ ರೋಗಿಗಳಿಗೂ ವ್ಯಾಪಿಸಲಾರಂಭಿಸಿರುವುದು ರಾಜ್ಯ ವನ್ನು ಆತಂಕಕ್ಕೆ ತಳ್ಳಿದೆ. ಬೇರೆ ಬೇರೆ ಕಾಯಿಲೆಯಿಂದ ಬಳಲುತ್ತಿರುವವರು ಆಸ್ಪತ್ರೆಗೆ ಬಂದು ಪರೀಕ್ಷೆಗೊಳಪಟ್ಟಾಗ ಕರೊನಾ ಸೋಂಕು ತಗುಲಿರುವ ಪ್ರಕರಣ ಬೆಳಕಿಗೆ ಬರುತ್ತಿವೆ. ಇಂತಹ 74 ಸೋಂಕಿತರೀಗ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಟ್ಟು 482 ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ.
ರಾಜ್ಯದಲ್ಲಿ ಕಳೆದ 15 ದಿನದಿಂದ ಸಾವಿನ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. ಈವರೆಗೆ 137 ಜನ ಬಲಿಯಾಗಿದ್ದಾರೆ. ಒಟ್ಟು ಸಾವಿನ ಪೈಕಿ ಕಳೆದ 10 ದಿನದ ಅವಧಿಯಲ್ಲೇ 74 (ಶೇ.54) ಜನ ಮೃತಪಟ್ಟಿದ್ದಾರೆ. ಜೂ.10ರಿಂದ ಕೆಮ್ಮು, ನೆಗಡಿ, ಶೀತಜ್ವರ (ಐಎಲ್ಐ) ದಿಂದ 402 ಹಾಗೂ ತೀವ್ರ ಉಸಿರಾಟ ತೊಂದರೆ (ಸಾರಿ)ಯಿಂದ 108 ಜನರು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಪರೀಕ್ಷೆಗೊಳಪಟ್ಟಾಗ ಕರೊನಾ ಸೋಂಕು ದೃಢಪಟ್ಟಿದೆ. ಕಳೆದ ಮೂರು ದಿನದಲ್ಲಿ ಶೀತಜ್ವರ ಹಾಗೂ ಉಸಿರಾಟ ತೊಂದರೆಯ 277 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕರೊನಾ ವಾರ್ ರೂಂ ಮಾಹಿತಿ ಪ್ರಕಾರ ಪ್ರಸ್ತುತ 482 ಸೋಂಕಿತರು ಗಂಭೀರ ಸ್ಥಿತಿ (ಹೈರಿಸ್ಕ್) ಯಲ್ಲಿದ್ದಾರೆ. ಇವರಿಗೆ ಹೆಚ್ಚುವರಿ ಕಾಳಜಿವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೈರಿಸ್ಕ್ನಲ್ಲಿದ್ದ ಶೇ.12 ಜನರು ಸಾವಿಗೀಡಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚುವರಿ ಐಸಿಯು: ಈವರೆಗೆ 494 ತೀವ್ರ ನಿಗಾ ಘಟಕ(ಐಸಿಯು)ದ ಹಾಸಿಗೆಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧ 16 ಆಸ್ಪತ್ರೆಗಳಲ್ಲಿ ಹೆಚ್ಚುವರಿಯಾಗಿ 167 ಐಸಿಯು ಹಾಸಿಗೆಗಳನ್ನು ಸಿದ್ಧಪಡಿಸಿದೆ. ಈಗ ಒಟ್ಟು 661 ಐಸಿಯು ಹಾಸಿಗೆಗಳಿದ್ದು, 77 ಹಾಸಿಗೆಗಳು ಭರ್ತಿಯಾಗಿರುವ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು 36, ಕಲಬುರಗಿ 11, ಬೀದರ್ 5, ಬಳ್ಳಾರಿ 5, ಧಾರವಾಡ 5, ದಾವಣಗೆರೆ 3, ದಕ್ಷಿಣ ಕನ್ನಡ, ಹಾಸನ ತಲಾ 2, ಉಡುಪಿ, ವಿಜಯಪುರ, ರಾಯಚೂರು, ಹಾವೇರಿ, ಬೆಳಗಾವಿ ಜಿಲ್ಲೆಗಳಲ್ಲಿ ತಲಾ 1 ಐಸಿಯು ಹಾಸಿಗೆಗಳು ಭರ್ತಿಯಾಗಿವೆ.
ಐಸಿಯು ಚಿಕಿತ್ಸೆ ಅಗತ್ಯ: ಐಎಲ್ಐ ಹಾಗೂ ತೀವ್ರ ಉಸಿರಾಟ ತೊಂದರೆ ಕಾರಣದಿಂದ ಸೋಂಕಿಗೆ ತುತ್ತಾದವರಿಗೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಐಸಿಯು ಹಾಸಿಗೆ ಹೆಚ್ಚು ಅಗತ್ಯವಾಗಿದ್ದು, ಲಭ್ಯವಿರುವ ಹಾಸಿಗೆಗಳ ಕೊರತೆಯಾಗಲಿದೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರ ಜೂ.20 ರಂದು 483 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿದ್ದು, ಅಲ್ಲಿಯೂ ಐಸಿಯು ಹಾಸಿಗೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಿದ್ಧಪಡಿಸುವಂತೆ ಸೂಚನೆ ನೀಡಿದೆ.
ಕ್ವಾರಂಟೈನ್ ಕಾರ್ಯ ವಿಳಂಬ: ಕಳೆದ ಒಂದು ವಾರದಿಂದ ವಿದೇಶ, ಹೊರ ರಾಜ್ಯಗಳಿಂದ ಬರುವವರ ಸಂಖ್ಯೆ ಇಳಿಮುಖವಾಗಿದೆ. ಹಾಗೆಯೇ ಪ್ರಯಾಣದ ಇತಿಹಾಸ ಹೊಂದಿರುವವರಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಮಾಣ ಕಡಿಮೆಯಾಗಿದೆ. ಆದರೆ, ಸ್ಥಳೀಯವಾಗಿ ಪ್ರಾಥಮಿಕ ಸಂಪರ್ಕ ಮತ್ತು ಅನಾರೋಗ್ಯ ತೊಂದರೆಯಿಂದ ಸೋಂಕಿಗೆ ಒಳಗಾಗಿ, ಅದು ವ್ಯಾಪಿಸುವುದನ್ನು ತಡೆಗಟ್ಟುವ ಕಾರ್ಯ ಮುಖ್ಯವಾಗಿದೆ. ಸೋಂಕಿತ ಪ್ರಕರಣಗಳನ್ನು ಆಸ್ಪತ್ರೆಗೆ ವರ್ಗಾಯಿಸುವುದು, ಅವರ ಸಂಪರ್ಕದವರನ್ನು ಕ್ವಾರಂಟೈನ್ ಮಾಡುವ ಕಾರ್ಯ ವಿಳಂಬವಾಗುತ್ತಿದ್ದು, ಸೋಂಕು ಮತ್ತಷ್ಟು ಜನರಿಗೆ ವ್ಯಾಪಿಸುತ್ತಿದೆ. ಕಂಟೇನ್ಮೆಂಟ್ ಜಾರಿಗೊಳಿಸುವ ಕಾರ್ಯ ನಿಧಾನವಾಗುತ್ತಿರುವುದರಿಂದ ಈ ಪ್ರದೇಶದಿಂದ ಜನರು ಮುಕ್ತವಾಗಿ ಹೊರಗೆ ಓಡಾಡುತ್ತಿದ್ದಾರೆ.