

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸಹಯೋಗ ಮತ್ತು ಸಂಪರ್ಕಗಳು ಕರ್ನಾಟಕ- ಯುನೈಟೆಡ್ ಸ್ಟೇಟ್ಸ್ ನಡುವೆ ಪರಸ್ಪರ ಲಾಭದಾಯಕ ಲಿತಾಂಶಗಳಿಗೆ ಎಡೆಮಾಡಿಕೊಡಲಿವೆ ಎಂಬ ನಂಬಿಕೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ವ್ಯಾಪಾರ-ವ್ಯವಹಾರಗಳಿಗೆ ಮುಕ್ತವಾಗಿದೆ. ರಾಜ್ಯದಲ್ಲಿರುವ ವಿಪುಲ, ಉತ್ತಮ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ ಪ್ರತಿನಿಧಿಗಳಿಗೆ ಆಹ್ವಾನಿಸಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಬಿಸಿನೆಸ್ ಕೌನ್ಸಿಲ್ (ಯುಎಸ್‌ಐಬಿಸಿ) ಪ್ರತಿನಿಧಿಗಳೊಂದಿಗೆ ಮಂಗಳವಾರ ದುಂಡು ಮೇಜಿನ ಸಭೆ ನಡೆಸಿದ ಅವರು, ಕರ್ನಾಟಕ ಮತ್ತು ಅಮೆರಿಕ ಮಧ್ಯೆ ಇರುವ ಸದೃಢ ಮತ್ತು ಕ್ರಿಯಾತ್ಮಕ ಪಾಲುದಾರಿಕೆಗೆ ಈ ಚರ್ಚೆ ಸಾಕ್ಷಿಯಾಗಿದೆ.
ವ್ಯವಹಾರಿಕ ಅವಕಾಶಗಳನ್ನಷ್ಟೇ ಚರ್ಚಿಸುತ್ತಿಲ್ಲ. ಹಿಂದೆಂದಿಗಿಂತಲೂ ಹೆಚ್ಚಿನ ಸಂಪರ್ಕ
ಹೊಂದಿರುವ, ಭವಿಷ್ಯದಲ್ಲಿ ಹೆಚ್ಚು ಸಮೃದ್ಧಿಯನ್ನು ತರುವ ನೀಲನಕ್ಷೆ ರೂಪಿಸುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಭಾರತದ ತಂತ್ರಜ್ಞಾನ ಕ್ರಾಂತಿಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ನಾವೀನ್ಯತೆ, ಉದ್ಯಮಶೀಲತೆ, ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿಯ ಕೇಂದ್ರವಾಗಿ ಮುಂದುವರಿದಿದೆ ಎಂದರು.
ದೃಢವಾದ ವ್ಯವಹಾರಗಳನ್ನು ಪೋಷಿಸುವ ಬದ್ಧತೆ, ಅಭಿವೃದ್ಧಿ ಮತ್ತು ಯಶಸ್ಸಿಗೆ ಪೂರಕವಾದ ವಾತಾವರಣವನ್ನು ಸೃಜಿಸಲು ನಿರಂತರವಾಗಿ ಶ್ರಮಿಸುತ್ತಿದ್ದೇವೆ ಎಂದು ಕೌನ್ಸಿಲ್ ಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಐಟಿ-ಬಿಟಿ, ಏರೋಸ್ಪೇಸ್ ಅಥವಾ ಇನ್ಯಾವುದೇ ಕ್ಷೇತ್ರವಿರಲಿ, ಜಾಗತಿಕ ಸವಾಲುಗಳನ್ನು ಎದುರಿಸಲು ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ ಸಹಯೋಗದೊಂದಿಗೆ ಒಟ್ಟಾಗಿ ಪರಿಹಾರ ಕಂಡುಕೊಳ್ಳಲು ಸಿದ್ಧವೆಂದು ಸಿಎಂ ಸಿದ್ದರಾಮಯ್ಯ ವಾಗ್ದಾನವಿತ್ತರು.
ಕರ್ನಾಟಕ ಅಪಾರ ಅವಕಾಶಗಳನ್ನು ಒದಗಿಸುವ ರಾಜ್ಯವಾಗಿದೆ. ನಮ್ಮ ಜನ ಹಾಗೂ ಜಾಗತಿಕ ಸಮುದಾಯದ ಭವಿಷ್ಯಕ್ಕಾಗಿ ಇವುಗಳನ್ನು ಬಳಸಿಕೊಳ್ಳಲು ಬದ್ಧರಾಗಿದ್ದೇವೆ. ವೈವಿಧ್ಯಮಯ ಸಂಪನ್ಮೂಲ, ಕೌಶಲ್ಯಭರಿತ ಕಾರ್ಯಪಡೆ, ವೇಗವಾಗಿ ಬೆಳೆಯುತ್ತಿರುವ ನವೋದ್ಯಮ ಸಂಸ್ಕೃತಿ, ಸದೃಢ ಉತ್ಪಾದನಾ ತಳಪಾಯವನ್ನು ಕರ್ನಾಟಕ ಹೊಂದಿದೆ.
ಐಟಿ-ಬಿಟಿ, ನವೋದ್ಯಮಗಳ ತವರೂರಾಗಿದೆ. ನಾವೀನ್ಯತೆ, ಸುಗಮ ವ್ಯವಹಾರ, ಸುಸ್ಥಿರ ಅಭಿವೃದ್ಧಿಗೆ ಪೂರಕ ನೀತಿಗಳನ್ನು ರೂಪಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.