ರಾಜ್ಯದಲ್ಲಿ ಏಳು ಹೊಸ ಪ್ರಕರಣ- ಸೋಂಕಿತರ ಸಂಖ್ಯೆ 415: 114 ಮಂದಿ ಬಿಡುಗಡೆ- 17 ಸಾವು

corona
Published on

ಬೆಂಗಳೂರು: ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಏಳು ಹೊಸ ಕರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಅವುಗಳ ಪೈಕಿ ವಿಜಯಪುರ ಹಾಗೂ ಕಲಬುರಗಿಯಲ್ಲಿ ತಲಾ ಮೂರು ಪ್ರಕರಣಗಳು ಪತ್ತೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಒಬ್ಬ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕುಪೀಡಿತರಾದವರ ಸಂಖ್ಯೆ 415ಕ್ಕೆ ಏರಿದ್ದು, 114 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕಲಬುರಗಿಯಲ್ಲಿ ಇಂದು 80 ವರ್ಷದ ಒಬ್ಬ ವೃದ್ಧ ಸೋಂಕಿಗೆ ಬಲಿಯಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮೃತರ ಸಂಖ್ಯೆ 17ಕ್ಕೆ ಏರಿದೆ. ಇಂದು ಮೃತಪಟ್ಟ ವ್ಯಕ್ತಿಯು ನಾಲ್ಕು ವರ್ಷಗಳಿಂದ ಪಾರ್ಕಿನ್‌ಸನ್ಸ್‌ ಕಾಯಿಲೆಯಿಂದ ಬಳಲುತ್ತಿದ್ದು ಮೂರು ವರ್ಷಗಳಿಂದ ಬೆಡ್‌ರಿಡನ್‌ ಆಗಿದ್ದರು. ಏ.19ರಂದು ತೀವ್ರ ಉಸಿರಾಟದ ತೊಂದರೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಸೋಂಕು ಪತ್ತೆಯಾಗಿತ್ತು ಎಂದು ಆರೋಗ್ಯ ಇಲಾಖೆ ಹೇಳಿದೆ.

ಕರೊನಾ ಸೋಂಕು ತಡೆಗಟ್ಟಲು ಮಸೀದಿಯಲ್ಲಿ ಯಾವುದೇ ಸಭೆ, ಪ್ರಾರ್ಥನೆ ನಡೆಸದಂತೆ ಹಾಗೂ ಮೃತ ವ್ಯಕ್ತಿಗಳನ್ನು ದಫನ್‌ ಮಾಡಲು ಅನುಮತಿ ನೀಡದಂತೆ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯು ರಾಜ್ಯದ ಎಲ್ಲ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿರುತ್ತದೆ.

ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net