

ಬೆಂಗಳೂರು: ರಾಜ್ಯದ ಆರ್ಥಿಕ-ಸಾಮಾಜಿಕ ಪ್ರಗತಿಗಾಗಿ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಬೇಕು. ಕೃಷಿ, ಕೈಗಾರಿಕೆ ಬೆಳವಣಿಗೆ ಆದಲ್ಲಿ ಮಾತ್ರ ಜಿಡಿಪಿ ಬೆಳವಣಿಗೆ ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ನಗರದ ಹೊರವಲಯ ಯಲಹಂಕದಲ್ಲಿ ರಾಜ್ಯದ ಪ್ರಪಥಮ ನೈಸರ್ಗಿಕ ಅನಿಲ ಆಧಾರಿತ 370 ಮೆ.ವ್ಯಾ. ಸಾಮರ್ಥ್ಯದ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರ ಲೋಕಾರ್ಪಣೆಗೊಳಿಸಿ ಮಂಗಳವಾರ ಮಾತನಾಡಿದರು.
ಕೃಷಿ, ಕೈಗಾರಿಕೆ ಹಾಗೂ ವಸತಿಗೆ ಅಪಾರ ಪ್ರಮಾಣದ ವಿದ್ಯುತ್ ಅಗತ್ಯವಿದೆ. ಕೃಷಿ-ಕೈಗಾರಿಕೆ ಅಭಿವೃದ್ಧಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಉದ್ಯೋಗದಿಂದ ಜಿಡಿಪಿ ದರ ಕೂಡ ವೃದ್ಧಿಸುತ್ತದೆ. ಆದ್ದರಿಂದ ನಾವು ವಿದ್ಯುತ್ ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾವಲಂಬಿಗಳಾಗುವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಅದರ ಭಾಗವಾಗಿಯೇ ಈ ವಿದ್ಯುತ್ ಉತ್ಪಾದನಾ ತಯಾರಿಕಾ ಘಟಕ ಲೋಕಾರ್ಪಣೆ ಮಾಡಿದ್ದೇವೆ ಎಂದು ಸಿಎಂ ಸಮರ್ಥಿಸಿದರು.
1,500 ಕೋಟಿ ಮೌಲ್ಯದ ವಿದ್ಯುತ್ ಮಾರಾಟ:
ಪ್ರಸ್ತುತ ರಾಜ್ಯದಲ್ಲಿ ವಿದ್ಯುತ್ ಕೊರತೆಯ ಇಲ್ಲ. ಬದಲಾಗಿ 1,500 ಕೋಟಿ ರೂ. ಮೌಲ್ಯದ ವಿದ್ಯುತ್ ಅನ್ನು ನಾವು ಹೊರರಾಜ್ಯಗಳಿಗೆ ಮಾರಾಟ ಮಾಡಿದ್ದೇವೆ. ಕಳೆದ ವರ್ಷ ಮಳೆ ಬಾರದೆ ಬರಗಾಲ ಇತ್ತು. ಆ ಕ್ಷಾಮ ಪರಿಸ್ಥಿತಿಯಲ್ಲೂ ಕೂಡ ನಾವು ಅಗತ್ಯ ವಿದ್ಯುತ್ ಪೂರೈಸಿದೆವು.
2030ಕ್ಕೆ 60,000 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಇದೆ. ಇದನ್ನು ನಾನು ಬಜೆಟ್‌ನಲ್ಲೇ ಘೋಷಿಸಿದ್ದು, ವರ್ಷದಿಂದ ವರ್ಷಕ್ಕೆ ವಿದ್ಯುತ್ ಬಳಕೆ, ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವಾಗಿ ನಾವು ಉತ್ಪಾದನೆ ಹೆಚ್ಚಿಸಿ ಸ್ವಾವಲಂಬಿ ಆಗಿದ್ದೇವೆ ಎಂದು ಸಿಎಂ ವಿವರಿಸಿದರು.
ತಂತ್ರಜ್ಞಾನ ಬಳಸಿ ಅನಿಲ ಸ್ಥಾವರ ಸ್ಥಾಪನೆ:
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಬೆಂಗಳೂರಿನ ನಾಗರಿಕರಿಗೆ ಅನಿಲ ವಿದ್ಯುತ್ ಸ್ಥಾವರವು ನಮ್ಮ ಸರ್ಕಾರದಿಂದ ಕೊಡಗೆಯಾಗಿ ನೀಡಿದ್ದೇವೆ. ಹಿಂದೆ ಇದೇ ಸ್ಥಳದಲ್ಲಿದ್ದ ಡೀಸೆಲ್ ವಿದ್ಯುತ್ ಘಟಕ ಸ್ಥಗಿತಗೊಳಿಸಿ, ಅತ್ಯಾಧುನಿಕ ತಂತ್ರಜ್ಞಾನದ ಅನಿಲ ಸ್ಥಾವರ ಸ್ಥಾಪಿಸಲಾಗಿದೆ. ನಾನು ಇಂಧನ ಸಚಿವನಾಗಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಮುಂದಿಟ್ಟ ಆಲೋಚನೆಯನ್ನೂ ಕೂಡಲೇ ಕಾರ್ಯಗತಗೊಳಿಸಲು ಪ್ರಯತ್ನಿಸಿ ಪ್ರಾರಂಭಿಸಿದ ಕೆಲಸ ಇದು ಸಾಕಾರಗೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್, ಸಚಿವರಾದ ದಿನೇಶ್ ಗುಂಡೂರಾವ್, ಬೈರತಿ ಸುರೇಶ್, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಶಾಸಕ ಎಸ್.ಆರ್. ವಿಶ್ವನಾಥ್, ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ಕೆ.ಗೋವಿಂದರಾಜು, ನಸೀರ್ ಅಹಮದ್, ಮೇಲ್ಮನೆ ಸದಸ್ಯ ಪ್ರಕಾಶ್ ರಾಥೋಡ್, ಸರ್ಕಾರದ ಎಸಿಎಸ್ ಗೌರವ್ ಗುಪ್ತಾ ಹಾಗೂ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.
ರಾಜ್ಯದ ಪ್ರಥಮ ಅನಿಲ ವಿದ್ಯುತ್ ಸ್ಥಾವರದ ಉದ್ಘಾಟನೆ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು. ಸರ್ಕಾರದ ಇಚ್ಛಾಶಕ್ತಿಯಿಂದ ಮುಚ್ಚಿದ ಘಟಕವನ್ನು ಪುನಾರಂಭಿಸಲು ಸಾಧ್ಯವಾಗಿದೆ. ಅಗ್ನಿ ಅವಘಡ, ಸುಪ್ರೀಂಕೋರ್ಟ್ ತಡೆಯಾಜ್ಞೆಯಿಂದ ಕೆಲ ವಿಘ್ನಗಳನ್ನು ನಿವಾರಿಸಿ ಈ ಹಂತ ತಲುಪಿದ್ದೇವೆ. ಗೇಲ್ ಒಪ್ಪಂದದ ಪೇ ಆ್ಯಂಡ್ ಟೇಕ್ ಷರತ್ತಿನ ನಿಬಂಧನೆಯನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಂಡಿದ್ದೇವೆ.
- ಕೆ.ಜೆ.ಜಾರ್ಜ್, ಇಂಧನ ಸಚಿವ
ಬೋನಸ್ ಘೋಷಣೆ:
ಯಲಹಂಕ ವಿದ್ಯುತ್ ಸ್ಥಾವರದ ಆರಂಭಿಸಲು ಶ್ರಮಿಸಿದ ಎಲ್ಲ ಕಾರ್ಮಿಕರಿಗೆ 5,000 ರೂ. ಬೋನಸ್ ಅನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಘೋಷಿಸಿದರು.