

ರಾಣೆಬೆನ್ನೂರ: ಕರ್ನಾಟಕ ಏಕೀಕರಣದ ರುವಾರಿಗಳೇ ಆಲೂರು ವೆಂಕಟರಾಯರು. ಅವರು ಹಾಕಿಕೊಟ್ಟ ರೂಪರೇಷಗಳಿಂದ ಮುಂಬೈ, ಹೈದರಾಬಾದ್, ಮೈಸೂರು ಪ್ರಾಂತಗಳಾಗಿದ್ದ ಕನ್ನಡ ನಾಡನ್ನು ಏಕೀಕರಣದ ಮೂಲಕ ಅಖಂಡ ಕರ್ನಾಟಕ ರಾಜ್ಯವನ್ನಾಗಿ ಮಾಡಲಾಗಿದೆ ಎಂದು ಧಾರವಾಡದ ಸಾಹಿತಿ ಶ್ರೀನಿವಾಸ ವಾಡಪ್ಪ ಹೇಳಿದರು.
ನಗರದ ಕರ್ನಾಟಕ ಸಂಘದ ವತಿಯಿಂದ ಏರ್ಪಡಿಸಿದ್ದ 89ನೇ ವರ್ಷದ ನಾಡಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಖಂಡ ಧಾರವಾಡ (ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿದಂತೆ) ಜಿಲ್ಲೆಯಲ್ಲಿ ವ್ಯವಹಾರ ಭಾಷೆಯಾಗಿ ಮರಾಠಿ ಪ್ರಚಲಿತದಲ್ಲಿತ್ತು. ಆದರೆ ಎಲ್ಲರೂ ಮನೆಯಲ್ಲಿ ಕನ್ನಡ ಮಾತನಾಡುತ್ತಿದ್ದರು. ಅದನ್ನು ಅರಿತ ವೆಂಕಟರಾಯರು ಕನ್ನಡ ಭಾಷೆ ನಾಡಭಾಷೆಯಾಗುವಂತೆ ಶ್ರಮಿಸಿದರು ಎಂದರು.
ಹಾನಗಲ್ಲ ಸಾಹಿತಿ ಸುರೇಖಾ ಕುಲಕಣಿರ್ ಮಾತನಾಡಿ, ಕನ್ನಡ ಭಾಷೆಯಲ್ಲಿ ಸೌಂಧರ್ಯವರಿತ ರನ್ನ, ಪೊನ್ನ ಪಂಪ ಮೊದಲಾದಕವಿಗಳು ಸಂಸತದಲ್ಲಿ ಬರೆಯದೆ ಸರಳ ಕನ್ನಡ ಭಾಷೆಯಲ್ಲಿ ಸಾಹಿತ್ಯರಚಿಸಿ ಕನ್ನಡದ ಕಂಪನ್ನು ಪಸರಿಸಿದರು ಎಂದರು.
ಡಾ. ಬಸವರಾಜ ಕೇಲಗಾರ ಮಾತನಾಡಿ, ಭುವನೇಶ್ವರಿ ಹಾಗೂ ದುರ್ಗೆ ಬೇರೆಯಲ್ಲ, ದುಷ್ಟತನ ಅಳಿದು ಶಿಷ್ಟತನ ಉಳಿಯಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಚಿಂತನೆ ಇರಬೇಕು ಎಂದರು.
ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಾವೇರಿಯ ಹಿರಿಯ ಪತ್ರಕರ್ತ ಮಾಲತೇಶ ಅಂಗೂರ ಅವರ ಪರಿಸರ ಮತ್ತು ಪತ್ರಕೋಧ್ಯಮ ಛಾಯಾಚಿತ್ರಗಳ ಪ್ರದರ್ಶನ ನಡೆಯಿತು.
ಕೆ.ಎನ್. ಷಣ್ಮುಖ ನಾಡಗೀತೆ ಹಾಡಿದರು. ವಿನಾಯಕ ಜೋಶಿ ಸ್ವಾಗತಿಸಿದರು. ಮಹೇಶ ನಾಡಿಗೇರ ವಂದಿಸಿದರು. ಅಭಿನಂದನ ಜೋಶಿ ನಿರೂಪಿಸಿದರು.