ಕರ್ನಾಟಕದ ಪ್ರೊ.ಯಜ್ಞೇಶ್ವರ ಶಾಸ್ತ್ರಿ ಸಾಂಚಿ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ ನೇಮಕ | Chancellor

dk-61-677e78db71a4f
Published on

ಬೆಂಗಳೂರು: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕೋಸಗುಳಿ ಮೂಲದ ಆಚಾರ್ಯ ಪ್ರೊ.ಯಜ್ಞೇಶ್ವರ ಶಾಸ್ತ್ರಿಇವರನ್ನು ಮಧ್ಯಪ್ರದೇಶ ಸರ್ಕಾರ ಮುಂದಿನ ಮೂರು ವರ್ಷಗಳ ಅವಧಿಗೆ ಸಾಂಚಿ ಯುನಿವರ್ಸಿಟಿ ಆಫ್ ಬುದ್ಧಿಸ್ಟ್, ಇಂಡಿಕ್ ಸ್ಟಡೀಸ್ ಇದರ ಕುಲಾಧಿಪತಿಗಳಾಗಿ(Chancellor) ನೇಮಕ ಮಾಡಿ ಆದೇಶ ಹೊರಡಿಸಿದೆ.

ಇದು ಗೌರವಾನ್ವಿತ ಹುದ್ದೆಯಾಗಿದ್ದು ಕನ್ನಡಿಗರೆಲ್ಲರಿಗೆ ಹೆಮ್ಮೆ ತರುವ ವಿಷಯವಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರೂ, ಶಿಕ್ಷಣ ತಜ್ಞರೂ ಆಗಿರುವ ಪ್ರೊ.ಯಜ್ಞೇಶ್ವರ ಅವರು ಈ ಹಿಂದೆ ಇದೇ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಗಮನಾರ್ಹ ಸೇವೆ ಸಲ್ಲಿಸಿದ್ದರು.

ಅವರು ಪ್ರಸ್ತುತ ಮಧ್ಯಪ್ರದೇಶ ಸರಕಾರದ ಸಂಸ್ಕೃತಿ ಸಚಿವಾಲಯದ ಆಚಾರ್ಯ ಶಂಕರ ಸಾಂಸ್ಕೃತಿಕ ಏಕ್ತಾ ನ್ಯಾಸಸ ಅಡ್ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ತಮ್ಮ ಅಪ್ರತಿಮ ಕೆಲಸದ ಮೂಲಕ ಜನಮನ್ನಣೆ ಗಳಿಸಿದ್ದಾರೆ.

ಪ್ರೊ.ಶಾಸ್ತ್ರಿ ಪರಿಚಯ

ವಿಶ್ವಖ್ಯಾತಿಯನ್ನು ಹೊಂದಿರುವ ಪ್ರೊ.ಶಾಸ್ತ್ರಿ ಅವರು ಭಾರತೀಯ ತತ್ವಶಾಸ್ತ್ರ, ವಿಶೇಷವಾಗಿ ಹಿಂದೂ, ಬೌದ್ಧ ಮತ್ತು ಜೈನ ಫಿಲಾಸಫಿಗಳ ವಿದ್ವಾಂಸರಾಗಿ ಬಹುಶ್ರುತರಾಗಿದ್ದು ಸಂಸ್ಕೃತ ಮತ್ತು ಭಾರತೀಯ ರಿಲಿಜನ್ ವಿಷಯಗಳಿಗೆ ಸಂಬಂಧಿಸಿಯೂ ತಮ್ಮ ಸಂಶೋದನೆಗಳು ಮತ್ತು ಉಪನ್ಯಾಸಗಳಿಗಾಗಿ ಖ್ಯಾತರಾಗಿದ್ದಾರೆ.

ಅವರು ಗುಜರಾತ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಸಹಪ್ರಾಧ್ಯಾಪಕ, ಪ್ರೊಫೆಸರ್, ಅಧ್ಯಕ್ಷರೂ,ಆಗಿ ಸುಮಾರು ನಲವತ್ತು ವರ್ಷಗಳಿಗೂ ಅಧಿಕ ಕಾಲ ಸೇವೆಸಲ್ಲಿಸಿದ್ದಾರೆ. ಅದಲ್ಲದೇ, ಐಸಿಸಿಆರ್, ಐಸಿಪಿಆರ್ ಗಳ ನ್ಯಾಶನಲ್ ಫೆಲೊ ಹಾಗೂ ನಾಮನಿರ್ದೇಶಿತ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುಜರಾತಿನ ಜಾಗತಿಕ ಶಾಂತಿ ಪ್ರತಿಷ್ಠಾನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಸದ್ಯ ನ್ಯೂಜಿಲ್ಯಾಂಡ್​ ನಲ್ಲಿ ತಮ್ಮ ಮಗನೊಂದಿಗೆ ವಾಸಿಸುತ್ತಿರುವ ಪ್ರೊ.ಶಾಸ್ತ್ರಿಗಳು ಮುಂದಿನ ಮೂರು ವರ್ಷಗಳ ಕಾಲ ಭೋಪಾಲದ ಸಮೀಪವಿರುವ ಸಾಂಚಿ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿ ಕೆಲಸ ನಿರ್ವಹಿಸಲಿದ್ದಾರೆ.

  • Beta
Beta feature
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net