ಆಂಧ್ರ ಎಲೆಕ್ಷನ್​ಗೆ ಕರ್ನಾಟಕ ಪೊಲೀಸರು!

police
Published on

| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಕರ್ತವ್ಯಕ್ಕಾಗಿ ಕರ್ನಾಟಕದ ಒಂದು ಸಾವಿರ ಪೊಲೀಸರು ಆಂಧ್ರ ಪ್ರದೇಶಕ್ಕೆ ತೆರಳಲು ಅಣಿಯಾಗಿದ್ದಾರೆ. ಮೇ 13 ರಂದು ಲೋಕಸಭೆಯ 4ನೇ ಹಂತದ ಮತದಾನ ನಡೆಯುತ್ತಿದೆ. ಇದೇ ಹೊತ್ತಲ್ಲಿ ಆಂಧ್ರದಲ್ಲಿ ಲೋಕಸಭೆ ಜತೆಗೆ ವಿಧಾನಸಭೆಗೂ ಚುನಾವಣೆ ನಡೆಯುತ್ತಿದೆ. ರಕ್ಷಣಾ ಕಾರ್ಯಕ್ಕಾಗಿ ಕರ್ನಾಟಕದ ವಿವಿಧ ಜಿಲ್ಲೆಗಳ 2500 ಪೊಲೀಸರು ಮೇ 10 ರಿಂದ 5 ದಿನ ಆಂಧ್ರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಬೆಂಗಳೂರು ಕಮಿಷನರೇಟ್​ನಿಂದ 400 ಪೊಲೀಸರು ತಿರುಪತಿ ಜಿಲ್ಲೆಗೆ, ತುಮಕೂರಿಂದ 150 ಪೊಲೀಸರು ಶ್ರೀ ಸತ್ಯಸಾಯಿ ಕ್ಷೇತ್ರಕ್ಕೆ , ಚಿಕ್ಕಬಳ್ಳಾಪುರದ 150 ಪೊಲೀಸರು ವೈಎಸ್​ಆರ್ ಕಡಪ, ಕೋಲಾರದ 100 ಅಣ್ಣಮಯ್ಯ ಕ್ಷೇತ್ರಕ್ಕೆ , ಚಿತ್ರದುರ್ಗದ 100 ಪೊಲೀಸರು ಕರ್ನಲ್​ಗೆ ಹಾಗೂ ರಾಮನಗರ ಜಿಲ್ಲೆಯ 100 ಪೊಲೀಸರು ನಂದ್ಯಾಲ್ ಜಿಲ್ಲೆಗೆ ತೆರಳುತ್ತಿದ್ದಾರೆ.

ಇನ್ನು 2ನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮೇ 7 ರಂದು ನಡೆಯಲಿರುವ ಮತದಾನಕ್ಕೆ ಚಿತ್ರದುರ್ಗದಿಂದ 19 ಪಿಎಸ್​ಐ/ಆರ್​ಎಸ್​ಐ ಸಹಿತ 764 ಪೊಲೀಸರು ಬೇರೆ ಬೇರೆ ಜಿಲ್ಲೆಗಳಿಗೆ ತೆರಳುತ್ತಿದ್ದಾರೆ. ರಾಯಚೂರಿಗೆ 284, ಬಳ್ಳಾರಿಗೆ 225 ಹಾಗೂ ಹಾವೇರಿಗೆ 225 ಪೊಲೀಸರು ತೆರಳುತ್ತಿದ್ದಾರೆ. ಜಿಲ್ಲೆಯ ಡಿಎಆರ್ ಹಾಗೂ ವಿವಿಧ ತಾಲೂಕುಗಳ ಠಾಣೆಗಳಿಂದ ಸಿವಿಲ್ ಪೊಲೀಸರನ್ನು ಬಂದೋಬಸ್ತ್​ಗೆ ನಿಯೋಜಿಸಲಾಗಿದೆ. ಬಿಸಿಲು ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಬಂದೋಬಸ್ತ್​ಗೆ ಯುವ ಪೊಲೀಸರನ್ನೇ ಕಳಿಸಲು ಹಿರಿಯ ಅಧಿಕಾರಿಗಳು ಆದ್ಯತೆ ನೀಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚಿತ್ರದುರ್ಗ ಸೇರಿದಂತೆ ರಾಜ್ಯದ ಗೃಹರಕ್ಷಕ ದಳ ಸಿಬ್ಬಂದಿ ಕೂಡ ತೆಲಂಗಾಣಕ್ಕೆ ತೆರಳಿದ್ದರು.

ನಿತ್ಯ ಕಾರ್ಯಕ್ಕೆ ಅಡಚಣೆ: ಕಳೆದ ಮೂರ್ನಾಲ್ಕು ತಿಂಗಳಿಂದ ತರಬೇತಿ, ವಿಐಪಿ ಬಂದೋಬಸ್ತ್ ಮೊದಲಾದ ಚುನಾವಣೆ ಸಂಬಂಧಿ ಸಿದ್ಧತೆಯಲ್ಲಿ ತೊಡಗಿದ್ದ ಪೊಲೀಸರಿಗೆ ಇನ್ನೂ ಕೂಡ ಕಾನೂನು ಸುವ್ಯವಸ್ಥೆ ಕೆಲಸಗಳಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಮಾತು ಇಲಾಖೆ ವಲಯದಲ್ಲಿದೆ. ಮೊದಲ ಹಂತದ ಮತದಾನದ ಬಳಿಕ ಚುನಾವಣೆ ಮುಗಿಯಿತು, ಇನ್ನು ದೈನಂದಿನ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಇಲಾಖೆ ಹಿರಿಯ ಅಧಿಕಾರಿಗಳು ಕೆಳಹಂತದ ಅಧಿಕಾರಿಗಳಿಗೆ ಸೂಚಿಸುತ್ತಿದ್ದಾರೆ. ಆದರೆ ಬೇರೆಡೆ ಬಂದೋಬಸ್ತ್​ಗೆ ಹೋಗಬೇಕಾಗುತ್ತದೆ. ಮತ ಎಣಿಕೆ, ಫಲಿತಾಂಶ, ವಿಜಯೋತ್ಸವ ಇತ್ಯಾದಿ ಚುನಾವಣೆ ಕಾರ್ಯ ಪೂರ್ಣಗೊಂಡ ಬಳಿಕವೇ ಪೊಲೀಸರು ದೈನಂದಿನ ಕರ್ತವ್ಯದಲ್ಲಿ ತೊಡಗಲು ಸಾಧ್ಯವೆಂಬ ಅಭಿಪ್ರಾಯವನ್ನು ಪೊಲೀಸ್ ಅಧಿಕಾರಿಯೊಬ್ಬರು ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net