

ಬೆಂಗಳೂರು: ಕರೊನಾ ವಿರುದ್ಧ ಹೋರಾಟದಲ್ಲಿ ವೈದ್ಯರು, ದಾದಿಯರು, ಅರೆವೈದ್ಯಕೀಯ ಮಾತ್ರವಲ್ಲದೇ. ಪೊಲೀಸ್ ಸೇವೆಯನ್ನು ಕೂಡ ಮುಂಚೂಣಿ ಪಡೆ ಎಂದೇ ಗುರುತಿಸಲಾಗಿದೆ.
ಜನರೆಲ್ಲ ಮನೆಯಲ್ಲಿರಬೇಕೆಂದರೆ, ಪೊಲೀಸರು ರಸ್ತೆಗೆ ಇಳಿಯಲೇಬೇಕು, ಕರ್ತವ್ಯ ನಿರ್ವಹಿಸಲೇ ಬೇಕು. ಆದರೆ, ಅವರನ್ನು ಕಾಪಾಡುವ ಹೊಣೆ ಇಲಾಖೆ ಮೇಲಿದೆ. ಸೋಂಕಿಗೆ ಒಳಗಾಗುತ್ತಿರುವವರಲ್ಲಿ ಹಿರಿಯ ವಯಸ್ಸಿನವರೇ ಹೆಚ್ಚಾಗಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆಯಲ್ಲಿರುವ ಹಿರಿಯರಿಗೆ 'ಕರೊನಾ ಡ್ಯೂಟಿಯಿಂದ ವಿನಾಯ್ತಿ ನೀಡಲು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.
ಕರೊನಾ ರೋಗಾಣುವಿನಿಂದ ಪೊಲೀಸ್ ಇಲಾಖೆಯ ಮಾನವ ಸಂಪನ್ಮೂಲವನ್ನು ಗರಿಷ್ಠ ಪ್ರಮಾಣದಲ್ಲಿ ರಕ್ಷಿಸುವ ಸಲುವಾಗಿ 55 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರನ್ನು ಹಾಗೂ ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಯೋಜಿಸುವಂತಿಲ್ಲ. ಠಾಣೆಯ ಒಳಾಂಗಣ ಅಥವಾ ವೈರಾಣು ಹರಡುವ ಸಂಭಾವ್ಯತೆ ಇರದ ಸ್ಥಳಗಳಲ್ಲಿ ನಿಯೋಜಿಸುವಂತೆ ಆದೇಶ ಹೊರಡಿಸಿದ್ದಾರೆ.
ಮಧುಮೇಹ, ರಕ್ತದೊತ್ತಡ, ಅಸ್ತಮಾ, ಕಿಡ್ನಿ ಹಾಗೂ ಯಕೃತ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸುರಕ್ಷಿತ ಸ್ಥಳಗಳಲ್ಲಿ ಸೇವೆಗೆ ಅವಕಾಶ ಕಲ್ಪಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮುಂಬೈನಲ್ಲಿ ಈಗಾಗಲೇ ನೂರಕ್ಕೂ ಅಧಿಕ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಕರೊನಾ ಸೋಂಕು ವ್ಯಾಪಿಸಿದೆ. ಜತೆಗೆ, ಚೆನ್ನೈನಲ್ಲೂ ಹೆಚ್ಚಿನ ಪೊಲೀಸರಲ್ಲಿ ಕರೊನಾ ಕಂಡು ಬಂದಿದೆ. ಹೀಗಾಗಿ ಅಲ್ಲಿಯೂ ಹಿರಿಯ ಪೊಲೀಸರನ್ನು ಸಾರ್ವಜನಿಕ ಕರ್ತವ್ಯಕ್ಕೆ ನಿಯೋಜಿಸುತ್ತಿಲ್ಲ. ರಜೆ ಪಡೆದು ಮನೆಯಲ್ಲಿ ಇರಬಹುದು ಎಂದು ಮುಂಬೈ ಪೊಲೀಸರಿಗೆ ತಿಳಿಸಲಾಗಿದೆ. ರಾಜ್ಯದಲ್ಲಿ ಅಂಥ ಕರ್ತವ್ಯದಿಂದಷ್ಟೇ ವಿನಾಯ್ತಿ ನೀಡಲಾಗಿದೆ. ಇದು ಚರ್ಚೆಗೆ ಕಾರಣವಾದರೆ ಅಚ್ಚರಿಯೇನಿಲ್ಲ.