ಡಿಜಿಟಲ್ ಅಂಕಪಟ್ಟಿ, ಕನಸು ನನಸು: ಡಿಜಿಲಾಕರ್​ನಲ್ಲಿ ಅಂಕಪಟ್ಟಿ ಲಭ್ಯ; ಅನುಷ್ಠಾನದಲ್ಲಿ ಕರ್ನಾಟಕ ನಂಬರ್ 1

pic 10
Published on

|ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

‘ಡಿಜಿಟಲ್ ಇಂಡಿಯಾ’ ಪರಿಕಲ್ಪನೆಯ ಪ್ರಯೋಜನಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ದಾಪುಗಾಲಿಟ್ಟಿದೆ. ರಾಷ್ಟ್ರೀಯ ಶೈಕ್ಷಣಿಕ ಠೇವಣಿ (ನ್ಯಾಷನಲ್ ಅಕಾಡೆಮಿ ಡೆಪಾಸಿಟಿರಿ) ಭಾಗವಾಗಿ ಇನ್ನುಮುಂದೆ ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣಪತ್ರ ಡಿಜಿಲಾಕರ್​ನಲ್ಲಿ ಸಿಗಲಿವೆ. ಮುಂದಿನ ಎರಡು ವಾರದಲ್ಲಿ 2.5 ಕೋಟಿಗೂ ಅಧಿಕ ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ, ಪಿಯುಸಿ ಅಂಕಪಟ್ಟಿಗಳು ಡಿಜಿಲಾಕರ್​ನಲ್ಲಿ ಲಭ್ಯವಾಗುತ್ತಿದೆ. ಜತೆಗೆ ರಾಜ್ಯದ 35 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಅಂಕಪಟ್ಟಿ, ಪ್ರಮಾಣ ಪತ್ರಗಳು ಸಹ ಕೆಲವೇ ತಿಂಗಳಲ್ಲಿ ಡಿಜಿಲಾಕರ್​ನಲ್ಲಿ ಬಂದು ಕೂರಲಿದೆ.

ಇ- ಆಡಳಿತ ಇಲಾಖೆಯ ವಿಶೇಷ ಪ್ರಯತ್ನ ದೇಶದಲ್ಲೇ ರಾಜ್ಯವನ್ನು ಮುಂಚೂಣಿ ಸ್ಥಾನದಲ್ಲಿ ನಿಲ್ಲಿಸಿದ್ದು, ಶೈಕ್ಷಣಿಕ ವ್ಯವಸ್ಥೆಯಲ್ಲಿ ಇದೊಂದು ಮಹತ್ವಪೂರ್ಣ ಘಟ್ಟವೂ ಆಗಲಿದೆ. 2003ರಿಂದ ಈಚೆಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 10ನೇ ತರಗತಿ ಸಾರ್ವತ್ರಿಕ ಪರೀಕ್ಷೆ ಎದುರಿಸಿದ ಮಕ್ಕಳ ಅಂಕಪಟ್ಟಿ ಡಿಜಿಲಾಕರ್​ಗೆ ಅಪ್​ಲೋಡ್ ಕೆಲಸ ಪ್ರಗತಿಯಲ್ಲಿದ್ದು, ಮುಂದಿನ 15 ದಿನಗಳಲ್ಲಿ ಲಭ್ಯವಾಗುವುದು. 2019- 20ನೇ ಸಾಲಿನ ಪ್ರಮಾಣ ಪತ್ರ ಅಳವಡಿಕೆ ಕಾರ್ಯ ಮುಗಿದಿದೆ.

ಪಿಯು ಶಿಕ್ಷಣ ಇಲಾಖೆ 2008ರಿಂದೀಚೆಗೆ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕಪಟ್ಟಿ ಸಹ ಇಷ್ಟರಲ್ಲೇ ಡಿಜಿಲಾಕರ್​ನಲ್ಲಿ ಲಭ್ಯವಾಗಲಿದೆ. 32 ವಿಶ್ವವಿದ್ಯಾಲಯಗಳ ಹಿಂದಿನ ವರ್ಷಗಳ ಅಂಕಪಟ್ಟಿ- ಪ್ರಮಾಣ ಪತ್ರ ಅಳವಡಿಸುವ ಕೆಲಸ ಶರವೇಗದಿಂದ ನಡೆದಿದೆ. ಒಟ್ಟಾರೆ ರಾಜ್ಯದಲ್ಲಿರುವ 82 ವಿವಿಗಳು- ಶೈಕ್ಷಣಿಕ ಸಂಸ್ಥೆ ಇದ್ದು, 80 ಸಂಸ್ಥೆಗಳು ಡಿಜಿಲಾಕರ್​ನಲ್ಲಿ ಅಂಕಪಟ್ಟಿ ಒದಗಿಸಲು ನೋಂದಣಿ ಮಾಡಿಕೊಂಡಿವೆ. ನ್ಯಾಷನಲ್ ಅಕಾಡೆಮಿ ಡೆಪಾಸಿಟಿರಿ ಅನುಷ್ಠಾನದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೊಮಾ, ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್ ಪ್ರಮಾಣ ಪತ್ರವನ್ನು ಡಿಜಿಲಾಕರ್​ನಲ್ಲಿ ಸಿಗುವಂತೆ ಮಾಡಿದೆ. ಈಗ ಹಿಂದಿನ ವರ್ಷದ ದಾಖಲೆ ಸಿಗುವಂತೆ ಮಾಡುವ ಕೆಲಸ ಮಾಡಲಾಗಿದೆ.

2.5 ಕೋಟಿ ಮಾರ್ಕ್ಸ್ ಕಾರ್ಡ್​ಗಳು ಡಿಜಿಲಾಕರ್​ನಲ್ಲಿ

ಡಿಜಿಲಾಕರ್​ನಲ್ಲಿ ಅಂಕಪಟ್ಟಿ, ಪ್ರಮಾಣ ಪತ್ರ ಸಿಗಬೇಕೆಂಬ ನಿಟ್ಟಿನಲ್ಲಿ ನಮ್ಮ ಸರ್ಕಾರದ ಪ್ರಯತ್ನ ಮಹತ್ವದ ಘಟ್ಟ ತಲುಪಿದೆ. ಶೀಘ್ರವೇ 2003ರಿಂದೀಚೆಗಿನ ಎಸ್​ಎಸ್​ಎಲ್​ಸಿ ಅಂಕಪಟ್ಟಿ ಹಾಗೂ 2008ರ ನಂತರದ ಪಿಯಸಿ ಅಂಕಪಟ್ಟಿಯು ಡಿಜಿಲಾಕರ್​ನಲ್ಲಿ ಸಿಗುವಂತೆ ಮಾಡುತ್ತಿದ್ದೇವೆ.

| ಶ್ರೀವ್ಯಾಸ್ ನ್ಯಾಡ್ ಯೋಜನಾ ನಿರ್ದೇಶಕ

ವೀಕ್ಷಿಸುವುದು ಹೇಗೆ?

ಡಿಜಿಲಾಕರ್ ಮೊಬೈಲ್ ಆಪ್ ಬಳಕೆ ಹೆಚ್ಚಾಗುತ್ತಿದೆ. ಬಳಕೆ ಮಾಡಿಕೊಳ್ಳದವರು ಡಿಜಿಲಾಕರ್ ಡೌನ್​ಲೋಡ್ ಮಾಡಿಕೊಂಡು ಸೇವೆ ಪಡೆದುಕೊಳ್ಳಬಹುದು. ಆಧಾರ್ ಆಧಾರಿತ ಡಿಜಿಲಾಕರ್​ನ ಒಳಪ್ರವೇಶಿಸಿ ತಮಗೆ ಯಾವ ಸಂಸ್ಥೆ ಅಂಕಪಟ್ಟಿ-ಪ್ರಮಾಣ ಪತ್ರವನ್ನು ನೀಡಿದೆಯೋ ಅದನ್ನು ಡೌನ್​ಲೋಡ್ ಮಾಡಿಕೊಳ್ಳಲು ಅವಕಾಶ ಇರಲಿದೆ. ರೋಲ್ ನಂಬರ್, ರಿಜಿಸ್ಟರ್ ನಂಬರ್, ಅಭ್ಯರ್ಥಿ ಹೆಸರು, ವರ್ಷವನ್ನು ನಮೂದಿಸಿದರೆ ಡಿಜಿಟಲ್ ರೂಪದ ದಾಖಲೆ ಸಿಕ್ಕಿ ಹೋಗುತ್ತದೆ. ಸಂಬಂಧಪಟ್ಟ ವಿದ್ಯಾರ್ಥಿಯ ಡಿಜಿಲಾಕರ್​ಗೆ ನೇರವಾಗಿ ಪ್ರಮಾಣ ಪತ್ರವನ್ನು ಕಳಿಸುವ ವ್ಯವಸ್ಥೆ ಕೂಡ ಬರುತ್ತಿದೆ.

ಲಭ್ಯ ಅಂಕಪಟ್ಟಿಗಳು
  • 2003ರಿಂದ ಈಚೆಗಿನ ಎಸ್​ಎಸ್​ಎಲ್​ಸಿ ಅಂಕಪಟ್ಟಿ
  • 2008ರಿಂದ ಈಚೆಗಿನ ದ್ವಿತೀಯ ಪಿಯುಸಿ ಅಂಕಪಟ್ಟಿ
  • 32 ವಿಶ್ವವಿದ್ಯಾಲಯಗಳ ಪದವಿ ಪ್ರಮಾಣ ಪತ್ರ
  • ಇನ್ನೂ 50 ವಿಶ್ವವಿದ್ಯಾಲಯಗಳ ಪ್ರಮಾಣ ಪತ್ರ ಶೀಘ್ರ ಲಭ್ಯವಾಗಲಿದೆ
  • ಡಿಪ್ಲೊಮಾ ವಿಟಿಯುನ ಹಿಂದಿನ ವರ್ಷದ ಪ್ರಮಾಣ ಪತ್ರ ಶೀಘ್ರದಲ್ಲೇ ಸಿಗಲಿದೆ
ಲಾಭವೇನು?
  • ಅಂಕಪಟ್ಟಿ ಕಳೆದರೆ ಸಂಬಂಧಪಟ್ಟ ಬೋರ್ಡ್​ಗೆ ಅಲೆದಾಟ ತಪ್ಪಲಿದೆ
  • ಉದ್ಯೋಗ ಸಂಬಂಧ ಅಂಕಪಟ್ಟಿ ಸಲ್ಲಿಸುವಾಗ ಡಿಜಿಟಲ್ ರೂಪದಲ್ಲಿ ಸಲ್ಲಿಸಬಹುದು
  • ಉದ್ಯೋಗದಾತರು ಆ ಕ್ಷಣವೇ ಅಂಕಪಟ್ಟಿ ನೈಜತೆ ಪರಿಶೀಲಿಸಬಹುದು
  • ಮುಂದಿನ ದಿನಗಳಲ್ಲಿ ನಕಲಿ ಅಂಕಪಟ್ಟಿ ಹಾವಳಿಗೆ ತಡೆ ಬೀಳಬಹುದು
  • ಸರ್ಕಾರಿ ವ್ಯವಸ್ಥೆಯಲ್ಲಿ ನಿರ್ವಹಣೆ ಯಾಗುವುದರಿಂದ ಮಾನ್ಯತೆ
  • ಸಮಯ ಮತ್ತು ಹಣದ ಉಳಿತಾಯವೂ ಆಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net