

ಬೆಂಗಳೂರು: ಪತ್ನಿಯನ್ನು ಬರ್ಬರವಾಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ತಾನು ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬಿಕ್ಕನಹಳ್ಳಿಯಲ್ಲಿ ನಡೆದಿದೆ. ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಕ್ಕನಹಳ್ಳಿ ಗ್ರಾಮದ ಜನತಾ ಕಾಲೋನಿಯಲ್ಲಿ ಪತಿ ವೆಂಕಟಸ್ವಾಮಿ ಹಾಗೂ ಲಕ್ಷ್ಮಮ್ಮ ವಾಸವಿದ್ದರು.
ಇಂದು ಮುಂಜಾನೆ ವೆಂಕಟಸ್ವಾಮಿ ಮನೆಯಲ್ಲಿ ಮಲಗಿದ್ದ ಪತ್ನಿ ಲಕ್ಷ್ಮಮ್ಮನನ್ನು ಮಚ್ಚಿನಿಂದ ಕತ್ತಿನ ಬಾಗಕ್ಕೆ ಬಲವಾಗಿ ಹೊಡೆದು ಕೊಲೆ ಮಾಡಿದ್ದು ಬಳಿಕ ಸ್ವಲ್ಪ ದೂರದಲ್ಲೇ ನಿರ್ಮಾಣ ಹಂತದಲ್ಲಿದ್ದ ತನ್ನ ಮನೆಯಲ್ಲಿ ವೆಂಕಟಸ್ವಾಮಿ ತೋಟಕ್ಕೆ ಬಳಸಲು ತಂದಿದ್ದ ವಿಷವನ್ನು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗೆ ಮನೆಯ ಬಳಿ ಹಿರಿಯ ಮಗಳು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು,ತಾಯಿಯನ್ನು ಕುತ್ತಿಗೆ ಭಾಗದಲ್ಲಿ ಕೊಚ್ಚಿ ಕೊಲೆ ಮಾಡಿರುವುದನ್ನು ನೋಡಿ ಅಕ್ಕಪಕ್ಕದ ನಿವಾಸಿಗಳು ಹಾಗೂ ತಮ್ಮ ಮನೆಯವರಿಗೆ ತಿಳಿಸಿದ್ದಾರೆ. ಬಳಿಕ ತಂದೆಗೆ ಕರೆ ಮಾಡಿದಾಗ ಅವರು ಸ್ವೀಕರಿಸಿರಲಿಲ್ಲ ಹುಡುಕಾಡಿದಾಗ ಅವರದ್ದೇ ನಿರ್ಮಾಣ ಹಂತದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಘಟನಾ ಸಂಬಂಧ ಸ್ಥಳಕ್ಕೆ ಬಂದ ಸರ್ಜಾಪುರ ಪೊಲೀಸರು ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿಕೊಂಡು ಮಹಾಜರು ನಡೆಸಿದ್ದಾರೆ. ಇದೇ ಗ್ರಾಮದ ಪಕ್ಕದಲ್ಲಿ ಇದ್ದ ಸ್ವಂತ ಮನೆಯನ್ನು ಬ್ಯಾಂಕಿನವರು ಹರಾಜು ಹಾಕಿದ್ದು ಇದರಿಂದಾಗಿ ವೆಂಕಟಸ್ವಾಮಿ ಹಾಗೂ ಲಕ್ಷ್ಮಮ್ಮ ಆಗಾಗ ಗಲಾಟೆ ಮಾಡಿಕೊಳ್ಳುತ್ತಿದ್ದರು. ನಿನ್ನೆ ರಾತ್ರಿಯೂ ಕೂಡ ಗಲಾಟೆ ನಡೆದು ಪತ್ನಿ ಲಕ್ಷ್ಮಮ್ಮನ್ನು ಕೊಲೆ ಮಾಡಿ ಬಳಿಕ ಭಯದಿಂದ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದ್ದು, ಬ್ಯಾಂಕಿನಿಂದ ಪಡೆದ ಸಾಲವನ್ನು ತೀರಿಸಲಾಗದೆ ಈ ಘಟನೆ ನಡೆದಿರುವ ಸಾಧ್ಯತೆಯಿದೆ.