

ಬೆಂಗಳೂರು: ಕನ್ನಡ ತಾಯಿ ಭುವನೇಶ್ವರಿ ದೇವಿಯನ್ನು ಕರ್ನಾಟಕ ರಾಜ್ಯ ದೇವತೆ ಎಂದು ಪೂಜಿಸಲಾಗುತ್ತದೆ. ಈ ಪ್ರತಿಮೆ ಕನ್ನಡಿಗರಲ್ಲಿ ನಾಡು, ನುಡಿಯ ಅಭಿಮಾನ ಮೂಡಿಸುವಲ್ಲಿ ಅನನ್ಯ ಪಾತ್ರ ವಹಿಸುತ್ತದೆ. ಈ ಭುವನೇಶ್ವರಿ ಪ್ರತಿಮೆಯನ್ನು ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ನಿರ್ಮಿಸಲಾಗುತ್ತಿದ್ದು, ಅಂತಿಮ ಹಂತದ ಕೆಲಸ ಕಾರ್ಯಗಳು ನಡೆಯುತ್ತಿವೆ.
ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಪ್ರತಿಮೆ ನಿರ್ಮಿಸಲಾಗುತ್ತದೆ. ಈ ದೇವಿ ಪ್ರತಿಮೆ ಹಿಂದೆ ಅದ್ಭುತವಾದ ಕರ್ನಾಟಕ ನಕ್ಷೆಯನ್ನೂ ನಿರ್ಮಿಸಲಾಗುತ್ತಿದ್ದು, ಭುವನೇಶ್ವರಿ ದೇವಿಗೆ ಈ ನಕ್ಷೆ ಕಿರೀಟದಂತಿದೆ(Karnataka map crown for Bhubaneswari statue).
.
ಕರ್ನಾಟಕ ನಕ್ಷೆಯಲ್ಲಿ ಉಬ್ಬು ಶಿಲ್ಪ ಇರಲಿದೆ. ಇದರ ಮುಂಭಾಗದಲ್ಲಿ ಭೌಗೋಳಿಕ ನಕ್ಷೆ ಹಾಗೂ ಹಿಂಬದಿಯಲ್ಲಿ ಕುವೆಂಪು ವಿರಚಿತ ‘ಜೈ ಭಾರತ ಜನನಿಯ ತನುಜಾತೆ...’ಎಂಬ ನಾಡಗೀತೆಯನ್ನು ಕೆತ್ತಲಾಗಿದೆ. ಇದರಲ್ಲಿ ರಾಜಲಾಂಛನಗಳಾದ ಹೊಯ್ಸಳ ಲಾಂಛನ, ವೈಜಯಂತಿ ಮಾಲೆ ಕಂಠಿಹಾರ, ಗಂಡಭೇರುಂಡ ಇರಲಿವೆ. ಪ್ರಖ್ಯಾತ ಶಿಲ್ಪಿ ಗೊಂಬೆಮನೆ ಕೆ. ಶ್ರೀಧರಮೂರ್ತಿ ಈ ಪ್ರತಿಮೆ ನಿರ್ಮಿಸುತ್ತಿದ್ದಾರೆ.
ಪ್ರತಿಮೆ 25ಅಡಿ ಎತ್ತರವಿದ್ದರೆ, ಕಂಚಿನ ಕರ್ನಾಟಕ ನಕ್ಷೆಯ ಉಬ್ಬು ಶಿಲ್ಪ 30 ಅಡಿ ಎತ್ತರವಿದೆ. ನೆಲಮಟ್ಟದಿಂದ ಈ ಪ್ರತಿಮೆ 41 ಅಡಿ ಎತ್ತರದಲ್ಲಿರುತ್ತದೆ. ಕರ್ನಾಟಕ ನಕ್ಷೆ ಸುಮಾರು 13 ಟನ್ ತೂಕವಿದ್ದು, ಪ್ರತಿಮೆ ಸೇರಿ ಒಟ್ಟು 31.50 ಟನ್ ತೂಕ ಇರಲಿದೆ.
ಕಂಚಿನ ಮೂಲ ಬಣ್ಣದಲ್ಲೇ ನಕ್ಷೆ ಇರಲಿದೆ. ಈ ನಕ್ಷೆಗೆ ಯಾವುದೇ ಬಣ್ಣ ಲೇಪಿಸುವುದಿಲ್ಲ. ಆಕ್ಸಿಡೇಷನ್ ಮಾಡಿ ಮೂಲ ಬಣ್ಣವನ್ನು ಉಳಿಸಿಕೊಳ್ಳಲಾಗುತ್ತದೆ. ಬಣ್ಣ ಹಚ್ಚುವುದರಿಂದ ಕೆಲವು ವರ್ಷಗಳ ನಂತರ ಅದು ಮಾಸುತ್ತದೆ. ಅದನ್ನು ಕೆರೆದು ಆಗಾಗ್ಗೆ ಬಣ್ಣ ಲೇಪಿಸಬೇಕಾಗುತ್ತದೆ. ಹಾಗಾಗಿ ಭುವನೇಶ್ವರಿ ಪ್ರತಿಮೆ ಮತ್ತು ನಕ್ಷೆಯನ್ನು ನೈಜಸ್ವರೂಪದಲ್ಲೇ ಉಳಿಸಿಕೊಳ್ಳಲಾಗುತ್ತದೆ. ಸ್ಟ್ಯಾಚು ಆ್ ಲಿಬರ್ಟಿ ಸೇರಿದಂತೆ ಅನೇಕ ಪ್ರತಿಮೆಗಳನ್ನು ನೈಸರ್ಗಿಕ ಬಣ್ಣದಲ್ಲೇ ಇರಿಸಲಾಗಿದೆ. ಅದೇ ಮಾದರಿಯನ್ನು ಭುವನೇಶ್ವರಿ ಪ್ರತಿಮೆ ಮತ್ತು ನಕ್ಷೆ ನಿರ್ಮಾಣದಲ್ಲೂ ಅನುಸರಿಸಲಾಗಿದೆ. ಇದರಿಂದ ಲೋಹದ ಸೋಪಜ್ಞತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ಪ್ರತಿಮೆಗೆ ಸದಾ ಸೊಬಗು ನೀಡುತ್ತದೆ.
ಭುವನೇಶ್ವರಿ ಪ್ರತಿಮೆ ಬೆಂಗಳೂರಿನ ಪ್ರೇಕ್ಷಣೀಯ ಸ್ಥಳಗಳಲ್ಲೊಂದಾಗಿ ಪ್ರವಾಸಿಗರನ್ನು ಆಕರ್ಷಿಸುವಂತಿದೆ. ರಾಜ್ಯ, ಹೊರ ರಾಜ್ಯ, ಹೊರ ದೇಶಗಳಿಂದ ಬರುವ ಪ್ರವಾಸಿಗರು, ಸಾಮಾನ್ಯ ಜನರು ಹಾಗೂ ಮಕ್ಕಳಿಗೆ ಭುವನೇಶ್ವರಿ ಪ್ರತಿಮೆ ಕುರಿತು ಮಾಹಿತಿ ಒದಗಿಸುವ ಲಕವನ್ನೂ ಇಲ್ಲಿ ಅಳವಡಿಸಲಾಗುತ್ತದೆ.
ಈ ಪ್ರತಿಮೆ ಸುತ್ತ ಗಾರ್ಡನಿಂಗ್ ಮಾಡಲಾಗಿದೆ. ಕಲ್ಲಿನ ಅಲಂಕಾರಿಕ ಕೈಪಿಡಿ ನಿರ್ಮಿಸಲಾಗುತ್ತದೆ. 10 ರಿಂದ 15 ದಿನಗಳಲ್ಲಿ ಈ ಪ್ರತಿಮೆ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಲಿದೆ.
ಶಿವಮೊಗ್ಗ ಮೂಲದ ಪ್ರಖ್ಯಾತ ಶಿಲ್ಪಿ ಗೊಂಬೆಮನೆ ಕೆ. ಶ್ರೀಧರಮೂರ್ತಿ ನೇತೃತ್ವದಲ್ಲಿ ಸುಮಾರು 80ಕ್ಕೂ ಹೆಚ್ಚು ಕುಶಲಕರ್ಮಿಗಳು ಬೃಹತ್ ಕಂಚಿನ ಕರ್ನಾಟಕ ನಕ್ಷೆಯನ್ನು ಸಿದ್ಧಪಡಿಸುತ್ತಿದ್ದಾರೆ.