ಸುಶಾಂತ್ ಕೇಸ್​ಗೆ ರಾಜ್ಯದ ನಂಟು!

Sushant Singh Rajaput - Final
Published on

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಮಾದಕ ದ್ರವ್ಯ ಜಾಲದ ಆಯಾಮದ ತನಿಖೆ ನಡೆಸುತ್ತಿರುವ ಮಾದಕದ್ರವ್ಯ ನಿಯಂತ್ರಣ ದಳ (ಎನ್​ಸಿಬಿ) ಬೆಂಗಳೂರಿನ ಇನ್ನೊಬ್ಬ ಡ್ರಗ್ಸ್ ಪೂರೈಕೆದಾರನಿಗೆ ತನಿಖೆಗೆ ಹಾಜರಾಗುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ. ತನಿಖೆಯ ರಹಸ್ಯ ಕಾಪಾಡುವ ದೃಷ್ಟಿಯಿಂದ ಆತನ ಹೆಸರನ್ನು ಬಹಿರಂಗಪಡಿಸಿಲ್ಲ. ಪ್ರಕರಣದ ಪ್ರಮುಖ ಆರೋಪಿ ರಿಯಾ ಚಕ್ರವರ್ತಿಯ ಸಹೋದರ ಶೌವಿಕ್​ಗೆ ಗಾಂಜಾ ಪೂರೈಸುತಿದ್ದ ಅಬ್ದುಲ್ ಬಸೀತ್ ಮತ್ತು ವಿಲಾತ್ರ ಎಂಬುವವರನ್ನು ಎನ್​ಸಿಬಿ ಅಧಿಕಾರಿಗಳು ಈ ಹಿಂದೆ ಬಂಧಿಸಿದ್ದರು.

ಕೀ ನಾಪತ್ತೆ: ಸುಶಾಂತ್ ಮೃತಪಟ್ಟಿದ್ದ ಕೋಣೆಯ ಬೀಗದ ಕೈ ನಾಪತ್ತೆಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ. ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಈ ವಿಚಾರದಲ್ಲಿ ಏನನ್ನೂ ಹೇಳಲಾರೆ ಎಂದು ಸುಶಾಂತ್​ರ ಕುಟುಂಬ ವಕೀಲ ವಿಕಾಸ್ ಸಿಂಗ್ ತಿಳಿಸಿದ್ದಾರೆ.

ಪ್ರಚಾರ ಫಲಕ ತೆರವು: ಸುಶಾಂತ್ ಸಾವಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಅಮೆರಿಕದಲ್ಲಿ ಹಾಕಲಾಗಿದ್ದ ಫಲಕಗಳನ್ನು ಹಾಲಿವುಡ್ ಮಾಧ್ಯಮ ಕಂಪನಿಯೊಂದು ತೆಗೆದು ಹಾಕಿದೆ. ರಿಯಾ ಚಕ್ರವರ್ತಿ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂಬ ಕಾರಣ ನೀಡಲಾಗಿದೆ. ಯಾರೋ ಹಣ ಕೊಟ್ಟು ಈ ಕೃತ್ಯ ಮಾಡಿಸಿದ್ದಾರೆ ಎಂದು ಸುಶಾಂತ್ ಸೋದರಿ ಶ್ವೇತಾ ಆರೋಪಿಸಿದ್ದಾರೆ.

ಔಷಧ ನಿಲ್ಲಿಸಿದ್ದ ಸುಶಾಂತ್

ಸುಶಾಂತ್ ತೀವ್ರ ಖಿನ್ನತೆ ಹಾಗೂ ಆತಂಕದಿಂದ ಬಳಲುತ್ತಿದ್ದರು. ಅಸ್ತಿತ್ವದ ಬಿಕ್ಕಟ್ಟು ಹಾಗೂ ದ್ವಿಮುಖ ವ್ಯಕ್ತಿತ್ವ ಸಮಸ್ಯೆಯೂ ಅವರನ್ನೂ ಕಾಡುತ್ತಿತ್ತು ಎಂದು ಚಿಕಿತ್ಸೆ ನೀಡಿದ್ದ ಇಬ್ಬರು ಮನೋರೋಗ ತಜ್ಞರು ಹೇಳಿದ್ದಾರೆ. ಅವರ ಹೇಳಿಕೆಗಳನ್ನು ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಔಷಧ ಸೇವನೆಯನ್ನು ಸುಶಾಂತ್ ನಿಲ್ಲಿಸಿದ್ದರು. ಇದರಿಂದ ಅವರ ಸ್ಥಿತಿ ಹದಗೆಟ್ಟು ಚಿಕಿತ್ಸೆ ನೀಡುವುದೂ ಕಷ್ಟವಾಗಿತ್ತು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net