ಸದನದಲ್ಲಿ ಗದ್ದಲ; ಕಾಂಗ್ರೆಸ್ - ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ

sadana
Published on

ಬೆಂಗಳೂರು: ಕಾಂಗ್ರೆಸ್​​ ಸರ್ಕಾರದ ಮೊದಲ ಅಧಿವೇಶನ ನಿನ್ನೆಯಿಂದ ಪ್ರಾರಂಭವಾಗಿದೆ. ಇಂದು ಸದನ ಪ್ರಾರಂಭವಾಗುತ್ತಿದ್ದಂತೆ ವಿರೋಧ ಪಕ್ಷದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ಕಾಂಗ್ರೆಸ್ - ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಹಿನ್ನೆಲೆಯಲ್ಲಿ ಪರಿಷತ್ ಕಲಾಪವನ್ನು ಮಧ್ಯಾಹ್ನ 1  ಗಂಟೆಗೆ ಮುಂದೂಡಲಾಗಿದೆ.

ಬಿಜೆಪಿ ನಾಯಕರಿಂದ ನಿಲುವಳಿ ಸೂಚನೆ ಮೇಲೆ ಚರ್ಚೆಗೆ ಅವಕಾಶ ನೀಡುವಂತೆ ಪ್ರಸ್ತಾಪಿಸಲಾಗಿದೆ. ಬಿಜೆಪಿ ನಾಯಕರ ಪ್ರಸ್ತಾಪಕ್ಕೆ ಸ್ಪೀಕರ್ ಖಾದರ್ ಅವಕಾಶ ನೀಡಿಲ್ಲ. ನಮ್ಮ ಮಾತನ್ನಾದರೂ ಕೇಳಿ ಎಂದು ಬೊಮ್ಮಾಯಿ ಹಾಗೂ ಸುನಿಲ್ ಕುಮಾರ್ ಪಟ್ಟು ಹಿಡಿದಿದ್ದಾರೆ. ಪ್ರಶ್ನೋತ್ತರ ಮುಗಿದ ಮೇಲೆ ಎಲ್ಲದಕ್ಕೂ ಅವಕಾಶ ಎಂದು ಸ್ಪೀಕರ್ ಹೇಳಿದ್ದಾರೆ. ಈ ವೇಳೆ ಬಿಜೆಪಿ ಸದಸ್ಯರು ಗದ್ದಲ ಪ್ರಾರಂಭಿಸಿದ್ದಾರೆ.

ಕಲಾಪ ನಡೆಯುತ್ತಿರುವ ವೇಳೆ ಸ್ಪೀಕರ್ ಮಾತಿಗೂ ಸುಮ್ಮನಾಗದ ಬಿಜೆಪಿ ಶಾಸಕರು, ನ್ಯಾಯ ಸಮ್ಮತ ಸ್ಥಾನದಲ್ಲಿದ್ದೀರಿ, ನಾವು ಯಾವ ವಿಷಯ ಪ್ರಸ್ತಾಪ ಮಾಡುತ್ತೇವೆ ಅಂತ ಕೇಳೋದಕ್ಕೇ ಅವಕಾಶ ನೀಡುತ್ತಿಲ್ಲ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ನಾವು ಪ್ರಸ್ತಾಪ ಮಾಡಲು ಅವಕಾಶ ಕೊಡಲ್ಲ ಅಂದ್ರೆ ಹೇಗೆ? ಪ್ರಶ್ನೋತ್ತರ ಸಸ್ಪಂಡ್ ಮಾಡಿ ಚರ್ಚೆಗೆ ಕೊಟ್ಟಿರುವ ಅನೇಕ ಉದಾಹರಣೆ ಇದೆ ಅಂತ ಸ್ಪೀಕರ್​ಗೆ ಬೊಮ್ಮಾಯಿ ಹೇಳಿದ್ದಾರೆ. ಪ್ರಶ್ನೋತ್ತರ ಕಲಾಪ ಶುರುವಾಗಿದೆ, ಶಾಸಕರಿಗೆ ಬೆಲೆ ಇಲ್ವಾ ಎಂದು ಸ್ಪೀಕರ್ ಖಾದರ್ ಉತ್ತರಿಸಿದ್ದಾರೆ.

ಈ ವೇಳೆ ಮಧ್ಯ ಪ್ರವೇಶಿಸಿಸಿ ಡಿಕೆಶಿ ಮಾತನಾಡಿ, ಬಿಜೆಪಿಯವರಿಗೆ ಹೊಸದಾಗಿ ನಮ್ಮ ಗ್ಯಾರಂಟಿ ತಡೆಯೋಕಾಗ್ತಿಲ್ಲ.ಏನೇನು ನುಡಿ ಮುತ್ತುಗಳನ್ನು ಕಳೆದ ೪೫ ದಿನಗಳದ್ದು ಇಟ್ಟುಕೊಂಡಿದ್ದಾರಲ್ಲ ಅದೆಲ್ಲ ಹೇಳಲಿ. ಉತ್ತರ ನೀಡಲು ನಾವು ರೆಡಿ ಇದ್ದೀವಿ ಎಂದಿದ್ದಾರೆ. ಪ್ರಶ್ನೋತ್ತರ ಕಲಾಪ ರದ್ದುಮಾಡಿ ಈಗಲೇ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಆಗ್ರಹಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ.

ಸಭಾಪತಿ ಪೀಠದಲ್ಲಿ ಕುಳಿತ ಉಪಸಭಾಪತಿ ಪ್ರಾಣೇಶ್, ನೀವು ಆಡಳಿತ ನಡೆಸಿದವರು, ನೀವು ವಿಪಕ್ಷಕ್ಕೆ ಬಂದ ಬಳಿಕ ನಿಯಮ ಬದಲಾವಣೆ ಆಗೊದಿಲ್ಲ. ಕುಳಿತುಕೊಳ್ಳಿ ಮೊದಲು ಪ್ರಶ್ನೋತ್ತರ ಮುಗಿಯಲಿ ಆ ನಂತರ ನಿಮಗೆ ಅವಕಾಶ ಕೊಡುತ್ತೇವೆ ಎಂದಿದ್ದಾರೆ.ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಬಿಜೆಪಿ ಸದಸ್ಯರು, ನಿಲುವಳಿ ಸೂಚನೆಗೆ ತೆಗೆದುಕೊಳ್ಳಲೇ ಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ವಿಪಕ್ಷ ಸದಸ್ಯರನ್ನ ಸಮಾಧಾನ ಪಡಿಸಲು ಯತ್ನಿಸಿದ ಉಪ ಸಭಾಪತಿ ಕೋಪಗೊಂಡು ಪೀಠದಿಂದ ಎದ್ದು ನಿಂತು ಎಲ್ಲರೂ ಕುಳಿತುಕೊಳ್ಳಿ ಎಂದು ಏರುದನಿಯಲ್ಲಿ ಸೂಚಿಸಿದ್ದಾರೆ. ಈ ವೇಳೆ ಕುಳಿತುಕೊಂಡ ವಿಪಕ್ಷ- ಆಡಳಿತ ಪಕ್ಷದ ಸದಸ್ಯರು.

ಸದನದ ಬಾವಿಗಿಳಿದ ಬಿಜೆಪಿ ನಾಯಕರು, ನಿಲುವಳಿ ಸೂಚನೆಯ ಚರ್ಚೆಗೆ ಅವಕಾಶ ನೀಡುವಂತೆ ಧರಣಿ ನಡೆಸಿದ್ದಾರೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಜನತೆಗೆ ಮೋಸಮಾಡುತ್ತಿರುವ ಕಾಂಗ್ರೆಸ್ ಧಿಕ್ಕಾರ ಧಿಕ್ಕಾರ ಎಂದು ಕೂಗಲಾಗಿದೆ. ಕಾಂಗ್ರೆಸ್​​ ಮತ್ತು ಬಿಜೆಪಿ ಶಾಸಕರ ನಡುವೆ ಗದ್ದಲವಾದ ಹಿನ್ನೆಲೆಯಲ್ಲಿ ಪರಿಷತ್ ಮಧ್ಯಾಹ್ನ 1  ಗಂಟೆಗೆ ಮುಂದೂಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net