ಗ್ರಾಮೀಣ ಕ್ರೀಡೆ ಕೌಶಲದ ಪ್ರತೀಕ: ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ ಅಭಿಪ್ರಾಯ

26-12-rama-janapada loka1
Published on

ರಾಮನಗರ: ವೈವಿದ್ಯತೆಗಳ ನಾಡು ಭಾರತದಲ್ಲಿ ಹಳ್ಳಿ ಆಟಗಳು ಸಾಕಷ್ಟು ಜನಪ್ರಿಯವಾಗಿವೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರಕಬೇಕು ಎಂದು ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ ಹೇಳಿದರು.

ಜಾನಪದ ಲೋಕದಲ್ಲಿ ಭಾನವಾರು ನಾಡೋಜ ಜಿ.ನಾರಾಯಣ ಅವರ ನೆನಪಿಗಾಗಿ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣ ಆಟಗಳ ಉತ್ಸವ 2021ರ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕಣ್ಣಾ ಮುಚ್ಚಾಲೆ, ಲಗೋರಿ, ಚಿನ್ನಿದಾಂಡು, ಕುಂಟೋಬಿಲ್ಲೆ, ಹಗ್ಗ ಜಗ್ಗಾಟ ಹೀಗೆ ಹಲವಾರು ಆಟಗಳು ಗ್ರಾಮೀಣರ ಬುದ್ಧಿ ಮತ್ತೆ ಮತ್ತು ಕೌಶಲ್ಯದ ಪ್ರತೀಕವಾಗಿವೆ.

ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಜಾನಪದ ಲೋಕ ಕ್ರೀಡಾ ಕೂಟ

ಹಮ್ಮಿಕೊಳ್ಳು ಮೂಲಕ ಗ್ರಾಮೀಣ ಆಟಗಳನ್ನು ಉಳಿಸಿ ಬೆಳಸುವ ಪ್ರಯತ್ನ ಮಾಡುತ್ತಿದೆ ಎಂದರು. ಸರ್ಕಾರವೂ ಸಹ ಗ್ರಾಮೀಣ ಆಟಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಗ್ರಾಪಂ ನಿಯಮಗಳಲ್ಲಿ ಬದಲಾವಣೆ ಮಾಡಿ, ಗ್ರಾಮೀಣ ಆಟಗಳ ಆಯೋಜನೆಗೆ ಅವಕಾಶ ಮಾಡಿಕೊಟ್ಟಿದೆ. ಗ್ರಾಮ ಮಟ್ಟದಲ್ಲಿ ಯುವ ಸಮುದಾಯ ಗ್ರಾಮೀಣ ಆಟಗಳಲ್ಲಿ ಸರ್ಕಾರದ ಸಲವತ್ತುಗಳನ್ನು ಪಡೆದುಕೊಂಡು ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.

ಅಖಿಲ ಭಾರತ ಜಾನಪದ ಮತ್ತು ಬುಡಕಟ್ಟು ಪರಿಷತ್ ಅಧ್ಯಕ್ಷ ನಿರ್ಮಲ್ ವೈದ್ಯ ಮಾತನಾಡಿ, ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡುವಲ್ಲಿ ಮುಂಚೂಣಿಯಲ್ಲಿದೆ. ಗ್ರಾಮೀಣ ಕ್ರೀಡಾಕೂಟಗಳು ಪ್ರತಿ ಗ್ರಾಮದಲ್ಲಿ ನಡೆಯಬೇಕು. ಗ್ರಾಮೀಣ

ಪ್ರದೇಶದಲ್ಲಿ ಜನಿಸಿದವರು, ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ಭಾರತವೇ ಅಭಿವೃದ್ಧಿ ಯಾದಂತೆ ಎನ್ನುವುದು ಅವರಿಗೆ ತಿಳಿದಿದೆ ಎಂದರು.

ಕರ್ನಾಟಕ ಸಹಾಸ ಕಲಾ ಅಡಾಡೆಮಿ ಸಂಸ್ಥಾಪಕ ಹಾಸನ ರಘು ಮಾತನಾಡಿ, ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗುವುದು. ಕುದುರೆ ಓಟ, ಕೆಸರು ಗದ್ದೆ ಓಟ ಆಲೋಚನೆ ಇದ್ದು, ಕಣ್ವ ಡ್ಯಾಂ ಬಳಿ ಉತ್ತಮ ಜಾಗವಿದೆ. ಈ ಕ್ರೀಡೆಗಳನ್ನು ಆಯೋಜಿಸಲು ಜಾನಪದ ಲೋಕ ನೆರವು ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ನಾಡೋಜ ಜಿ.ನಾರಾಯಣ ಅವರ ಪುತ್ರ ಡಾ.ಎಚ್.ರಾಘವೇಂದ್ರ, ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಸು.ತ.ರಾಮೇಗೌಡ, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಜೋಗಿಲ ಸಿದ್ದರಾಜು ಜಾನಪದ ಲೋಕದ ಸಿಬ್ಬಂದಿ ಇದ್ದರು.

ಇದೇ ವೇಳೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳ ಜತೆ ಒಬ್ಬರಾದ ಅಧ್ಯಕ್ಷ ಟಿ.ತಿಮ್ಮೇಗೌಡ, ಚಕ್ರ ಬಂಡಿ ಹೊಡೆಯುವ ಮೂಲಕ ಮಕ್ಕಳಿಗೆ ಹುರಿದುಂಬಿಸಿದರು. ನಂತರ ಹಳ್ಳಿಗುಳಿ ಮಣೆ, ಅಣ್ಣೆ ಕಲ್ಲಾಟ, ಲಗೋರಿ ಮುಂತಾದ ಆಟಗಳಲ್ಲಿ ಪಾಲ್ಗೊಂಡಿದ್ದ ಮಕ್ಕಳ ಜತೆಯೂ ತಿಮ್ಮೇಗೌಡ ಆಟವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net