

ಶಿವಮೊಗ್ಗ: ಉನ್ನತ ಶಿಕ್ಷಣದಲ್ಲಿ ಬೇರೆಲ್ಲ ರಾಜ್ಯಗಳಿಗಿಂತ ಕರ್ನಾಟಕ ಮುಂದಿದೆ. ಪದವಿ ವಿದ್ಯಾರ್ಥಿಗಳಿಗೆ ಕೌಶಲ ಶಿಕ್ಷಣ ನೀಡುವ ಯೋಜನೆ ಜಾರಿಗೆ ತರಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಆಯುಕ್ತ ಜಿ.ಜಗದೀಶ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ರಾಜ್ಯ ವಿಶ್ವವಿದ್ಯಾಲಯಗಳ ಮತ್ತು ಕಾಲೇಜುಗಳ ನಿವೃತ್ತ ಅಧ್ಯಾಪಕರ ಸಂಘದ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಪದವಿಯಲ್ಲೇ ಕೌಶಲಕ್ಕೆ ಒತ್ತು ನೀಡುವ ಕಾರಣ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಈ ಸಂಬಂಧ ವಿವಿಧ ಐಟಿ ಸಂಸ್ಥೆಗಳ ಜತೆ ಚರ್ಚಿಸಲಾಗಿದೆ ಎಂದರು.
ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಬದಲಾವಣೆ ತರುವ ದೃಷ್ಟಿಯಿಂದ ಪ್ರತಿ ಕಾಲೇಜುಗಳಿಗೆ ಭೇಟಿ ನೀಡಲಾಗುತ್ತಿದೆ. ಪ್ರಾಧ್ಯಾಪಕರು ಸರಿಯಾಗಿ ಪಾಠ ಮಾಡುವಂತೆ ಮತ್ತು ಕಾಲೇಜಿನ ನಿಗದಿತ ವೇಳೆಯಲ್ಲಿ ಹಾಜರಿರುವಂತೆ ಮಾಡಲಾಗುತ್ತಿದೆ. ದಿಢೀರ್ ಭೇಟಿ ವೇಳೆ ಹಾಜರಿಲ್ಲದ ಉಪನ್ಯಾಸಕರನ್ನು ಸ್ಥಳದಲ್ಲಿಯೇ ಅಮಾನತು ಮಾಡಲಾಗುತ್ತಿದೆ. ಉಪನ್ಯಾಸಕರು ತಮ್ಮ ವೃತ್ತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರದ ಹಣದಲ್ಲಿ ಇತರೆ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಬೇಕೆಂದು ಸೂಚಿಸಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಸಾವಿರಾರು ಸುಸಂಸ್ಕೃತ ಪ್ರಜೆಗಳನ್ನು ತಯಾರು ಮಾಡಿದ ನಿವೃತ್ತ ಅಧ್ಯಾಪಕರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಮತ್ತು ಉನ್ನತ ಶಿಕ್ಷಣ ಸಚಿವರೊಡನೆ ಮಾತನಾಡುವುದಾಗಿ ಭರವಸೆ ನೀಡಿದರು.
ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ಸೂಡಾದಿಂದ ನಿವೃತ್ತ ಪ್ರಾಧ್ಯಾಪಕರ ಸಂಘಕ್ಕೆ ನಿವೇಶನ ಕಲ್ಪಿಸಲಾಗುವುದು. ಈ ಮೂಲಕ ನಿವೃತ್ತರ ಋಣ ತೀರಿಸಲಾಗುವುದು ಎಂದರು.
75 ವರ್ಷ ಮೀರಿದ ನಿವೃತ್ತ 43 ಉಪನ್ಯಾಸಕರನ್ನು ಗೌರವಿಸಲಾಯಿತು. ರಾಜ್ಯ ನಿವೃತ್ತ ಉಪನ್ಯಾಸಕರ ಸಂಘದ ಅಧ್ಯಕ್ಷ ಪ್ರೊ. ಲೋಕೇಶ್, ಜಿಲ್ಲಾಧ್ಯಕ್ಷ ಪ್ರೊ. ಗೌಡರ ಶಿವಣ್ಣ, ರಾಜ್ಯ ಸಮಿತಿ ಪದಾಧಿಕಾರಿಗಳಾದ ರಾಮಚಂದ್ರಪ್ಪ, ಶ್ರೀರಾಮ ರೆಡ್ಡಿ, ರೇಣುಕಮ್ಮ, ದೇವರಾಜ ಗೌಡ, ಮಂಜುನಾಥ ಇತರರಿದ್ದರು.