ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿನಿಯರ ಪ್ರಮಾಣ ಹೆಚ್ಚಳ; ಕರ್ನಾಟಕದ ಸ್ಥಾನವೆಷ್ಟು?

education
Published on

ಬೆಂಗಳೂರು: ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯು 2014ರಿಂದೀಚೆಗೆ 90 ಲಕ್ಷ ಹೆಚ್ಚಳವಾಗಿದ್ದು, ಒಟ್ಟು ದಾಖಲಾತಿ 4.32 ಕೋಟಿ ತಲುಪಿದೆ. ಈ ಒಟ್ಟು ದಾಖಲಾತಿಯಲ್ಲಿ 2 ಕೋಟಿ ವಿದ್ಯಾರ್ಥಿನಿಯರೇ ಸೇರಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಾಹಿತಿ ಹಂಚಿಕೊಂಡಿದ್ದಾರೆ.

2014ಕ್ಕೆ ಹೋಲಿಕೆ ಮಾಡಿದರೆ ಪ್ರಸ್ತುತ ಓದುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆಯಲ್ಲಿ ಶೇ.31.6 ಹೆಚ್ಚಳವಾಗಿದೆ. 2014ರಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ದಾಖಲಾತಿ 3.42 ಕೋಟಿ ಇತ್ತು. 2021-22ರ ಸಮೀಕ್ಷೆ ಪ್ರಕಾರ ದಾಖಲಾತಿ ಶೇ.28 ಏರಿಕೆಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಯಾಗಿದೆ ಎಂದಿದ್ದಾರೆ.

ಕೇಂದ್ರ ಶಿಕ್ಷಣ ಸಚಿವಾಲಯದ ವರದಿ ಪ್ರಕಾರ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಉನ್ನತ ಶಿಕ್ಷಣ ಸಂಸ್ಥೆಗಳು ಒದಗಿಸುವ ಸಂಪನ್ಮೂಲಗಳು ಅಭಿವೃದ್ಧಿಯಾಗಿದ್ದು, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಸದ್ಯ, ದೇಶದಲ್ಲಿ 1,113 ವಿಶ್ವವಿದ್ಯಾಲಯಗಳು ಹಾಗೂ 43,796 ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.

ಟಾಪ್ 6ರಲ್ಲಿ ಕರ್ನಾಟಕ
ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂಬುದರ ಕುರಿತು ಶಿಕ್ಷಣ ಸಚಿವಾಲಯ ವರದಿ ಮಾಡಿದ್ದು, ಪ್ರಸ್ತುತ ವರ್ಷದಲ್ಲಿ 12.3 ಲಕ್ಷ ಅಭ್ಯರ್ಥಿಗಳು ಜಂಟಿ ಪ್ರವೇಶ ಪರೀಕ್ಷೆಗೆ (ಜೆಇಇ) ಅರ್ಜಿ ಸಲ್ಲಿಸುವ ಮೂಲಕ ದಾಖಲೆ ಬರೆದಿದ್ದಾರೆ. ಇದರಲ್ಲಿಯೂ ಮಹಿಳಾ ಅಭ್ಯರ್ಥಿಗಳು ಹೆಚ್ಚಾಗಿದ್ದಾರೆ. ಹಿಂದಿನ ವರ್ಷದಲ್ಲಿ ಕೇವಲ 3.7 ಲಕ್ಷ ಮಂದಿ ಜೆಇಇ ಮೇನ್ಸ್‌ಗೆ ಅರ್ಜಿ ಸಲ್ಲಿಸಿದ್ದರು. ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಅತೀ ಹೆಚ್ಚು ದಾಖಲಾತಿ ವರದಿಯಾಗಿದ್ದು, ಇವು ಉನ್ನತ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ ಮೊದಲ 6 ರಾಜ್ಯಗಳಾಗಿವೆ.

ಪಿಜಿ ಪ್ರಮಾಣ ಶೇ.12
ಬಿಎ, ಬಿ.ಕಾಂ, ಬಿಟೆಕ್, ಎಂಬಿಬಿಎಸ್ ಕಾಲೇಜುಗಳು ಮತ್ತು ತಾಂತ್ರಿಕ ಶಿಕ್ಷಣ ಕಾಲೇಜುಗಳು ಸೇರಿ ಒಟ್ಟು ಶೇ.79 ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯುತ್ತಿದ್ದು, ಶೇ.12 ವಿದ್ಯಾರ್ಥಿಗಳು ಮಾತ್ರ ಸ್ನಾತಕೋತ್ತರ ಪದವಿ ಪಡೆಯಲು ಮುಂದಾಗುತ್ತಿದ್ದಾರೆ.

ಕಲಾ ವಿಭಾಗಕ್ಕೆ ಹೆಚ್ಚು ಮಣೆ
ಅತಿ ಹೆಚ್ಚು ವಿದ್ಯಾರ್ಥಿಗಳು ಪದವಿ ಶಿಕ್ಷಣದಲ್ಲಿ ಕಲಾ ವಿಭಾಗ ಆಯ್ದುಕೊಳ್ಳುತ್ತಿರುವುದು ದಾಖಲಾತಿ ಪ್ರಮಾಣದಲ್ಲಿ ಕಂಡುಬಂದಿದೆ. ವಿಜ್ಞಾನ ವಿಭಾಗದಲ್ಲಿ ಶೇ.15.5 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಶೇ.13.9 ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದಾರೆ. ಇನ್ನೂ ಇಂಜಿನಿಯರ್ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಶೇ.11.9 ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಜೆಇಇ ಪರೀಕ್ಷೆಗಳನ್ನು ನಡೆಸುವ ಐಐಟಿಗಳು, ಎನ್‌ಐಟಿಗಳು ಮತ್ತು ಎಐಸಿಟಿಇಯಂತಹ ಇಂಜಿನಿಯರಿಂಗ್ ಸಂಸ್ಥೆಗಳ ಜಾಗತಿಕ ಮಟ್ಟದ ಸಾಧನೆಯನ್ನು ವರದಿ ಉಲ್ಲೇಖಿಸಿದ್ದು, ಭಾರತ ಮಾತ್ರವಲ್ಲದೆ ದೋಹಾ, ದುಬೈ, ಕಠ್ಮಂಡು, ಮಸ್ಕತ್, ಸಿಂಗಾಪುರ, ಕುವೈತ್, ಕೊಲಂಬೊ, ಜಕಾರ್ತ್, ವಿಯೆಟ್ನಾ, ಮಾಸ್ಕೋ ಮತ್ತು ಬ್ಯಾಂಕಾಕ್ ಸೇರಿ ಹಲವು ವಿದೇಶಗಳಲ್ಲಿ ಜೆಇಇ ಪರೀಕ್ಷೆಗಳು ನಡೆಯುತ್ತವೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net