ಚುನಾವಣಾ ಕಣದಲ್ಲಿ ಸೋಲುಂಡು ಪಕ್ಷಕ್ಕೆ ಶಾಕ್ ಕೊಟ್ಟ ಬೊಮ್ಮಾಯಿ ಸಂಪುಟದ ಸಚಿವರು!

all
Published on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ-2023ರ ಬಹುತೇಕ ಫಲಿತಾಂಶ ಹೊರಬಿದ್ದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದ ಹಲವಾರು ಸಚಿವರು ಚುನಾವಣಾ ಕಣದಲ್ಲಿ ಮುಗ್ಗರಿಸಿದ್ದಾರೆ. ರಾಜ್ಯ ಸರ್ಕಾರದ ಆಡಳಿತ ವೈಖರಿ ಹಾಗೂ ಸರ್ಕಾರದ ವಿರುದ್ಧವಿದ್ದ ಅಸಮಾಧಾನವನ್ನು ಜನರು ಮತದಾನದ ಮೂಲಕ ಹೊರಹಾಕಿದ್ದಾರೆ. ಚುನಾವಣಾ ಫಲಿತಾಂಶವೇ ಇದಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎನ್ನಬಹುದು.

ಸಚಿವ ಸಂಪುಟದ ಸಚಿವರಲ್ಲಿ ಕೆಲವರು ಸೋಲನ್ನೆ ಅರಿಯದ ಹಾಗೂ ಗೆಲ್ಲುವಂತಹ ಅಭ್ಯರ್ಥಿಗಳೆಂದು ಪರಿಗಣಿಸಿ ಅನೇಕ ಸಚಿವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೊಡಲಾಗಿತ್ತು. ಆದರೆ, ಮತದಾರರ ವಿಶ್ವಾಸ ಗೆಲ್ಲುವಲ್ಲಿ ಅನೇಕ ಸಚಿವರು ವಿಫಲರಾಗಿದ್ದಾರೆ.

ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಶಿಕ್ಷಣ ಸಚಿವ ಡಾ ಕೆ ಸುಧಾಕರ್, ಬಳ್ಳಾರಿ ಗ್ರಾಮಾಂತರದಿಂದ ಸ್ಪರ್ಧಿಸಿದ್ದ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು, ಕೆಆರ್ ಪೇಟೆ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಯುವಜನ ಮತ್ತು ಕ್ರೀಡೆ, ರೇಷ್ಮೆ ಸಚಿವ ನಾರಾಯಣಗೌಡ, ಮುಧೋಳದಿಂದ ಸ್ಪರ್ಧಿಸಿದ್ದ ಜಲಸಂಪನ್ಮೂಲ ಖಾತೆ ಸಚಿವ ಗೋವಿಂದ್ ಕಾರಜೋಳ ಪರಾಭವಗೊಂಡಿದ್ದಾರೆ.

ವರುಣಾ ಮತ್ತು ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಸತಿ ಹಾಗೂ ಮೂಲಸೌಕರ್ಯ ಇಲಾಖೆ ಸಚಿವ ವಿ.ಸೋಮಣ್ಣ, ಬೀಳಗಿಯಿಂದ ಸ್ಪರ್ಧಿಸಿದ್ದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಚಿಕ್ಕನಾಯಕನಹಳ್ಳಿಯಿಂದ ಸ್ಪರ್ಧಿಸಿದ್ದ ಸಣ್ಣ ನೀರಾವರಿ ಮತ್ತು ಕಾನೂನು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಸೋಲು ಕಂಡಿದ್ದಾರೆ.

ಅಲ್ಲದೇ, ಹಿರೀಕೆರೂರಿನಿಂದ ಸ್ಪರ್ಧಿಸಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್, ಹೊಸಕೋಟೆಯಿಂದ ಸ್ಪರ್ಧಿಸಿದ್ದ ಪೌರಾಡಳಿತ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಸಚಿವ ಎಂಟಿಬಿ ನಾಗರಾಜ್ ಹಾಗೂ ಯಲಬುರ್ಗದಿಂದ ಕಣಕ್ಕಿಳಿದಿದ್ದ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಮತ್ತು ತಿಪಟೂರಿನಿಂದ ಸ್ಪರ್ಧಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪರಾಭವಗೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net