

ಮಂಗಳೂರು: ಮದುವೆಗಾಗಿ ಮತಾಂತರ ಹುನ್ನಾರವನ್ನು ರಾಜ್ಯದಲ್ಲಿ ಸಹಿಸಲಾಗದು, ಅಂತಹ ಸಂಚನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಗುರುವಾರ ರಾಜ್ಯ ಕಾರ್ಯಕಾರಿಣಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಬೇರೆ ರಾಜ್ಯದಲ್ಲಿ ಏನು ಮಾಡುತ್ತಾರೊ ಗೊತ್ತಿಲ್ಲ, ಆದರೆ ನಮ್ಮಲ್ಲಿ ಸಣ್ಣವಯಸ್ಸಿನ ಹೆಣ್ಣು ಮಕ್ಕಳನ್ನು ಹಣದ ಆಮಿಷವೊಡ್ಡಿ, ಪ್ರೇಮದ ನಾಟಕವಾಡಿ ಮತಾಂತರಗೊಳಿಸಿ ಮದುವೆಯಾಗುವ ಪ್ರಕರಣ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.
ಕರೊನಾದಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು, ಆದರೆ ಈಗ ಸ್ಥಿತಿ ಸುಧಾರಣೆ ಆಗುತ್ತಿದೆ, ಶಾಸಕರ 50 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗಿದೆ, ಮಂಗಳೂರು ಮಹಾನಗರಪಾಲಿಕೆ ಸೇರಿದಂತೆ 10 ಮಹಾನಗರಪಾಲಿಕೆಗಳಿಗೆ 125 ಕೋಟಿ ರೂ. ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ 50 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು.
ನಳಿನ್‌ಗೆ ಸಿಎಂ ಶ್ಲಾಘನೆ: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅವರು ಉತ್ತಮ ಸಂಘಟನೆಯ ಕೆಲಸ ಮಾಡಿದ್ದಾರೆ, ನಿರೀಕ್ಷೆ ಮೀರಿ ಕಾರ್ಯನಿರ್ವಹಿಸಿದ್ದಾರೆ ಎಂಬ ಶ್ಲಾಘನೆಯನ್ನು ಸಿಎಂ ವ್ಯಕ್ತಪಡಿಸಿದರು.