ಬಿಜೆಪಿಗೆ ಹಾನಗಲ್, ಸಿಂದಗಿ ಅಗ್ನಿ ಪರೀಕ್ಷೆ

Bommai
Published on

ಬೆಂಗಳೂರು: ಪಕ್ಷದ ಸಂಘಟನೆ ತಳಹದಿ ಭದ್ರವಾಗಿದೆ ಎಂಬ ಆತ್ಮವಿಶ್ವಾಸ, ಪಾಲಿಕೆ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಹಾನಗಲ್, ಸಿಂದಗಿ ವಿಧಾನಸಭೆ ಕ್ಷೇತ್ರಗಳಲ್ಲಿ ಹೊಗೆಯಾಡುತ್ತಿರುವ ಅಸಮಧಾನ, ಬಂಡಾಯದ ಬಿಸಿ ಸಂದಿಗ್ಧತೆ ತಂದಿಟ್ಟಿದ್ದು, ಉಪ ಚುನಾವಣೆ ಅಗ್ನಿ ಪರೀಕ್ಷೆಯಾಗಿ ಪರಿಣಮಿಸಿದೆ.

ಹಠಾತ್​ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ದಾವಣಗೆರೆ ಕರೆಯಿಸಿಕೊಂಡು ಅಪನಂಬಿಕೆ, ಅಸಮಾಧಾನ ಮತ್ತು ಅಪಸ್ವರಗಳನ್ನು ನೀಗಿಸುವ ಕಸರತ್ತು ನಡೆಸಲಾಗಿದೆ. ಹಾನಗಲ್ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಸಿ.ಎಸ್.ಬಳ್ಳಾರಿ ಒತ್ತಡಕ್ಕೆ ಕಟ್ಟುಬಿದ್ದು ನಾಮಪತ್ರ ಹಿಂದಕ್ಕೆ ಪಡೆದಿದ್ದರೂ ಸಮಸ್ಯೆ ಪೂರ್ಣ ಬಗೆಹರಿದಿದೆ ಎಂದು ಹೇಳಲಾಗದು. ಉದಾಸಿ ಕುಟುಂಬಕ್ಕೆ ಟಿಕೆಟ್ ತಪ್ಪಿಸಿ ಶಿವರಾಜ ಸಜ್ಜನರ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ಎದಿದ್ದ ಅಪಸ್ವರ ಕ್ರಮೇಣ ಕಡಿಮೆಯಾಗಿದೆಯಾದರೂ, ಮುಖಂಡರ ಮಧ್ಯೆ ಸಮನ್ವಯದ ಕೊರತೆ ಕಾಡುತ್ತಿದೆ.

ಇತ್ತ ಸಿಂದಗಿ ಕ್ಷೇತ್ರದಲ್ಲಿ ರಮೇಶ್ ಭೂಸನೂರು ಅವರನ್ನೇ ಮತ್ತೆ ಕಣಕ್ಕಿಳಿಸಿರುವುದು ಹಲವು ಮುಖಂಡರ ಬೇಗುದಿ ಹೆಚ್ಚಿಸಿದೆ. ಎರಡು ಬಾರಿ ಶಾಸಕರಾಗಿದ್ದ ಭೂಸನೂರ ಕಳೆದ ಬಾರಿ ಸೋಲುಂಡಿದ್ದಾರೆ. ಆದರೆ ಇವರ ಸಂಪರ್ಕ ಮತ್ತು ಸಂವಹನ ಹೇಳಿಕೊಳ್ಳುವಂತಿಲ್ಲ. ಮುಖಂಡರು ಮತ್ತು ಕಾರ್ಯಕರ್ತರ ಜತೆಗೆ ಒಡನಾಟ ಅಷ್ಟಕ್ಕಷ್ಟೇ ಇದೆ. ಅಧಿಕಾರ, ಸಂಘಟನೆ, ಅಭಿವೃದ್ಧಿ ಬಲಕ್ಕಿಂತ ಎದುರಾಳಿಗಳ ನಕಾರಾತ್ಮಕ ಅಂಶಗಳು ತಮಗೆ ವರವಾಗಬಹುದು ಎಂದು ಲೆಕ್ಕ ಹಾಕುವ ಸ್ಥಿತಿ ಸದ್ಯಕ್ಕಿದ್ದು, ಮುಂದಿನ ಬೆಳವಣಿಗೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿವೆ.

ನಿರ್ಬಂಧ: ಹಾನಗಲ್ ಕ್ಷೇತ್ರದ ಜಾತಿ-ಮತದ ಸಮೀಕರಣ, ಮತಬಲದ ಲೆಕ್ಕಾಚಾರ ವಿಭಿನ್ನವಾಗಿದೆ. ಹೀಗಾಗಿ ಕಟ್ಟರ್ ಹಿಂದುತ್ವವಾದಿ ಭಾಷಣಕಾರರಿಗೆ ನಿರ್ಬಂಧ ವಿಧಿಸಲಾಗಿದೆ. ಮುಸ್ಲಿಂ ಸಮುದಾಯದ ಮುಖಂಡರ ವಿಶ್ವಾಸ ಗಳಿಸುವ ವರಸೆಯೂ ಚುರುಕಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಎಲ್ಲರನ್ನು ಒಳಗೊಂಡ ವಿಕಾಸದ ಮಂತ್ರ ಜಪಿಸುತ್ತಿದ್ದಾರೆ. ಸಂಸದ ಶಿವಕುಮಾರ್ ಉದಾಸಿ ಅವರನ್ನು ಜತೆಗೆ ಕೊಂಡೊಯ್ದು ಒಟ್ಟಾಗಿದ್ದೇವೆ ಎಂಬ ಸಂದೇಶ ಸಾರುವ ಪ್ರಯತ್ನವೂ ನಡೆದಿದೆ.

ಬೊಮ್ಮಾಯಿಗೆ ಟೆನ್ಷನ್

ಸಿಎಂ ಆಗಿ ಬಸವರಾಜ ಬೊಮ್ಮಾಯಿಗೆ ಮೊದಲ ಉಪ ಚುನಾವಣೆ. ತವರು ಜಿಲ್ಲೆ ಹಾವೇರಿ ವ್ಯಾಪ್ತಿಯಲ್ಲಿ ಹಾನಗಲ್ ಕ್ಷೇತ್ರವಿರುವುದು ಪ್ರತಿಷ್ಠೆ ಪ್ರಶ್ನೆಯಾಗಿದೆ. ವಿವಿಧ ಮೂಲಗಳಿಂದ ಲಭ್ಯ ಮಾಹಿತಿಯು ಬೊಮ್ಮಾಯಿ ಟೆನ್ಷನ್ ಹೆಚ್ಚಿಸಿದೆ. ಪಕ್ಷದ ಅಧಿಕೃತ ಅಭ್ಯರ್ಥಿಗೆ ಅಡ್ಡಗಾಲಾಗಿದ್ದ ಸಿ.ಎಸ್.ಬಳ್ಳಾರಿ ಮನವೊಲಿಕೆ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಗಡಬಡಿಸಿ ದಾವಣಗೆರೆಗೆ ತೆರಳಿ ಗೌಪ್ಯ ಕಾರ್ಯಾಚರಣೆ ನಡೆಸಿದರು. ಸಿಂದಗಿಯಲ್ಲೂ ಗೆಲ್ಲಬೇಕೆಂಬ ಉತ್ಸಾಹವಿರುವುದೇನೋ ಸರಿ. ಅದಕ್ಕೆ ಬೇಕಾಗಿರುವುದು ಇನ್ನೂ ತಯಾರಿ ಹಂತದಲ್ಲಿ ಇರುವುದು ಕಾರ್ಯಕರ್ತರಲ್ಲಿ ತಳಮಳ ಹುಟ್ಟಿಹಾಕಿದೆ ಎಂದು ಮೂಲಗಳು ಹೇಳಿವೆ.

ಯಡಿಯೂರಪ್ಪಗೆ ಮೊರೆ

ಬಿ.ವೈ.ವಿಜಯೇಂದ್ರ ಅವರನ್ನು ಚುನಾವಣಾ ಉಸ್ತುವಾರಿ ಪಟ್ಟಿಯಿಂದ ಕೈಬಿಟ್ಟು ಎಡವಟ್ಟು ಮಾಡಿಕೊಂಡವರು ತ್ವರಿತವಾಗಿ ಸರಿಪಡಿಸಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಲ್ಲದೆ ಚುನಾವಣಾ ರಾಜಕಾರಣದಲ್ಲಿ ಮೇಲುಗೈ ಸಾಧಿಸುವುದು ಅಸಾಧ್ಯವೆಂದು ಅರಿವಾಗಿ ಅವರಿಗೆ ಮೊರೆ ಹೋಗಿದ್ದಾರೆ. ಆದಷ್ಟು ಬೇಗ ಅವರನ್ನು ಎರಡೂ ಕ್ಷೇತ್ರಗಳ ಚುನಾವಣಾ ಪ್ರಚಾರಕ್ಕೆ ಇಳಿಸಿ, ಕಾರ್ಯತಂತ್ರದಲ್ಲಿನ ಲೋಪ ಸರಿಪಡಿಸಿಕೊಳ್ಳಲು ಕೆಲ ನಾಯಕರು ಬಯಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಮಸಾಲ ಜಯರಾಂ ಬಹಿರಂಗ ಬಂಡಾಯ

ತುಮಕೂರು: ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸುರೇಶ್​ಗೌಡ ರಾಜೀನಾಮೆ ನೀಡಿದ ಬೆನ್ನಲ್ಲೇ ತುಮಕೂರು ಬಿಜೆಪಿ ಬಂಡಾಯಕ್ಕೆ ಕೇಂದ್ರವಾಗುವ ಲಕ್ಷಣಗಳು ಗೋಚರಿಸುತ್ತಿದ್ದು ಇದೀಗ ತುರುವೇಕೆರೆ ಶಾಸಕ ಮಸಾಲ ಜಯರಾಂ ಬಹಿರಂಗ ಬಂಡಾಯ ಸಾರಿದ್ದಾರೆ. ಪಕ್ಷ ತನಗೆ ದ್ರೋಹ ಮಾಡುತ್ತಿದ್ದು ಇನ್ನು ತಾಳ್ಮೆಯಿಂದ ಇರಲು ಸಾಧ್ಯವಿಲ್ಲ. ನಾನೇನು ಸಚಿವ ಸ್ಥಾನ ಕೇಳಿಲ್ಲ. ಒಳ್ಳೆಯ ನಿಗಮ-ಮಂಡಳಿಗೆ ಬೇಡಿಕೆ ಇಟ್ಟಿದ್ದು, ನನ್ನ ಮಾತನ್ನು ಕಡೆಗಣಿಸಿದರೆ ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಇರುವುದಿಲ್ಲ ಎಂದು ನಗರದಲ್ಲಿ ಬುಧವಾರ ಸುದ್ದಿಗಾರರ ಮುಂದೆ ಅಸಮಾಧಾನ ಹೊರಹಾಕಿದರು. ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿ ಅವರಿಗೂ ನನ್ನ ಬೇಡಿಕೆ ಬಗ್ಗೆ ಮನವಿ ಮಾಡಿದ್ದೇನೆ. ಈ ತಿಂಗಳ ಅಂತ್ಯಕ್ಕೆ ಗಡುವು ಕೊಟ್ಟಿದ್ದೇನೆ. ಈಗ ಕೊಟ್ಟಿರುವ ಸಾಂಬಾರು ಅಭಿವೃದ್ಧಿ ಮಂಡಳಿಯಲ್ಲಿ ಹತ್ತು ರೂಪಾಯಿಯೂ ಇಲ್ಲ. ನಾನೇ ಊಟ ತೆಗೆದುಕೊಂಡು ಹೋಗಿ ಕೊಟ್ಟು ಬರುವ ಪರಿಸ್ಥಿತಿ ಇದೆ. ಪಕ್ಷದಲ್ಲಿ ಹೋರಾಟ ಮಾಡಿ ಪಕ್ಷ ಸಂಘಟನೆ ಮಾಡಿದ ಕಾರ್ಯಕರ್ತರಿಗೆ ಬೆಲೆ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪಕದನ ಅಂತಿಮ ಕಣ ಸಿದ್ಧ

ಹಾವೇರಿ/ವಿಜಯಪುರ: ಉಪಚುನಾವಣೆಯಲ್ಲಿ ನಾಮಪತ್ರ ಹಿಂಪಡೆಯಲು ಕೊನೇ ದಿನವಾದ ಬುಧವಾರ ಹಾನಗಲ್ಲ ಕ್ಷೇತ್ರದಲ್ಲಿ ನಾಲ್ವರು ನಾಮಪತ್ರ ವಾಪಸ್ ಪಡೆದಿದ್ದು, 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಿಯಾಜ್ ಶೇಖ್ (ಜೆಡಿಎಸ್), ಶಿವರಾಜ ಸಜ್ಜನರ (ಬಿಜೆಪಿ), ಶ್ರೀನಿವಾಸ ಮಾನೆ (ಕಾಂಗ್ರೆಸ್), ಉಡಚಪ್ಪ ಉದ್ದನಕಾಲ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಫಕೀರಗೌಡ ಗಾಜಿಗೌಡ್ರ (ರೈತ ಭಾರತ ಪಕ್ಷ), ಶಿವಕುಮಾರ ತಳವಾರ (ಲೋಕಶಕ್ತಿ ಪಕ್ಷ), ಪಕ್ಷೇತರರಾಗಿ ಉಮೇಶ ದೈವಜ್ಞ, ನಜೀರಅಹ್ಮದ ಸವಣೂರ, ಪರಶುರಾಮ ಹೊಂಗಲ, ಸಿದ್ದಪ್ಪ ಪೂಜಾರ, ಎಸ್.ಎಸ್. ದೊಡ್ಡಲಿಂಗಣ್ಣನವರ, ಸೋಮಶೇಖರ ಕೋತಂಬರಿ, ಹೊನ್ನಪ್ಪ ಅಕ್ಕಿವಳ್ಳಿ ಕಣದಲ್ಲಿದ್ದಾರೆ. ಅಶೋಕ ಹಣಜಿ, ಜಾಕೀರಹುಸೇನ ಅರಳಿಮರದ, ಚನ್ನಪ್ಪ ಬಳ್ಳಾರಿ, ಸಿಕಂದರಖಾನ್ ಮತ್ತಿಹಳ್ಳಿ ನಾಮಪತ್ರ ಹಿಂಪಡೆದಿದ್ದಾರೆ.

ಸಿಂದಗಿಯಲ್ಲಿ 6 ಅಭ್ಯರ್ಥಿಗಳು: ಸಿಂದಗಿಯಲ್ಲಿ 6 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಶೋಕ ಮನಗೂಳಿ (ಕಾಂಗ್ರೆಸ್), ನಾಜಿಯಾ ಅಂಗಡಿ (ಜೆಡಿಎಸ್), ರಮೇಶ ಭೂಸನೂರ (ಬಿಜೆಪಿ), ಡಾ. ಸುನೀಲಕುಮಾರ ಹೆಬ್ಬಿ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಪಕ್ಷೇತರರಾಗಿ ಜಿಲಾನಿ ಮುಲ್ಲಾ, ದೀಪಿಕಾ ಎಸ್. ಕಣದಲ್ಲಿದ್ದಾರೆ. ರಾಷ್ಟ್ರೀಯ ಸಮಾಜ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ವಿಕ್ರಮ ಪಂಡಿತ, ಪಕ್ಷೇತರ ಅಭ್ಯರ್ಥಿ ಅಬ್ದುಲ್ ರೆಹಮಾನ್ ದುಂಡಸಿ ಕಣದಿಂದ ಹಿಂದೆ ಸರಿದಿದ್ದಾರೆ.

ನಾನು ರಾಜಕೀಯ ಅಂತಿಮ ಘಟ್ಟದಲ್ಲಿದ್ದರೂ ಉಪ ಚುನಾವಣೆಯಲ್ಲಿ ಪ್ರಚಾರ ಮಾಡುತ್ತೇನೆ. ಅ.28ರ ಸಂಜೆ 5ರ ವರೆಗೆ ಸಿಂದಗಿಯಲ್ಲೇ ಇದ್ದು ಹಳ್ಳಿ-ಹಳ್ಳಿ ಸುತ್ತಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯ ಸುತ್ತಾಡಿ ಏಕಾಂಗಿಯಾಗಿ ಹೋರಾಡುವೆ. ಒಂದು ಉಪ ಚುನಾವಣೆಯಿಂದ ರಾಜಕೀಯ ಪಕ್ಷದ ಅಸ್ತಿತ್ವದ ಬಗ್ಗೆ ತೀರ್ವನಿಸಲು ಸಾಧ್ಯವಿಲ್ಲ.

| ಎಚ್.ಡಿ. ದೇವೇಗೌಡ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net