

ಬೆಂಗಳೂರು: ವಿತ್ತೀಯ ಕೊರತೆ, ಆರ್ಥಿಕ ಹಿಂಜರಿತದ ಸವಾಲುಗಳ ಮುಳ್ಳಿನ ಬೇಲಿಯ ಮೇಲೆ ನಿಂತು ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು ಸರ್ಕಸ್ ಮಾಡಬೇಕಾದ ಸಂಕಷ್ಟದ ನಡುವೆಯೇ ಸಿಎಂ ಬಿ.ಎಸ್.ಯಡಿಯೂರಪ್ಪ ‘ಸಾಮಾಜಿಕ ನ್ಯಾಯ, ಅಭಿವೃದ್ಧಿ ಧ್ಯೇಯ’ ಘೋಷವಾಕ್ಯದಡಿ ಸೋಮವಾರ ತಮ್ಮ 8ನೇ ಬಜೆಟ್ ಮಂಡಿಸಿದ್ದಾರೆ.
ಬೆಂಗಳೂರಿಗೆ 7795 ಕೋಟಿ ರೂ. ಎಲೆಕ್ಷನ್ ಗಿಫ್ಟ್: ಶಾಲೆ ಅಭಿವೃದ್ಧಿ, ಮಹಿಳೆಯರಿಗೆ ರಿಯಾಯಿತಿ ಬಸ್ ಪಾಸ್, ಬಸ್ಗಳಲ್ಲಿ ಸಿ.ಸಿ. ಟಿವಿ ಅಳವಡಿಕೆಯಂತಹ ದೆಹಲಿ ಮಾದರಿಯ ಘೋಷಣೆ ಹೊರಬಿದ್ದಿವೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಇದೇ ಮಾದರಿ ಘೋಷಣೆ ಮೂಲಕ ಗಮನ ಸೆಳೆದಿದ್ದರು. ಬಿಬಿಎಂಪಿ ಎಲೆಕ್ಷನ್ ಗಮನದಲ್ಲಿಟ್ಟುಕೊಂಡು ಸಿಎಂ ರಾಜಧಾನಿಗೆ 7795 ಕೋಟಿ ರೂ. ಅನುದಾನ ನೀಡಿದ್ದಾರೆ.
ಬದಲಾಗದ ತೆರಿಗೆ, ಕೊಂಚ ನಿರಾಳ: ಕರೊನಾ ಸಂಕಷ್ಟದ ಪರಿಣಾಮ ಬಿಎಸ್ವೈ ತೆರಿಗೆದಾರರಿಗೆ ಕೊಂಚ ನಿರಾಳ ಒದಗಿಸಿದ್ದಾರೆ. ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಏರಿಕೆ ಆಗಿಲ್ಲ. ಹಾಗೆಯೇ ತೆರಿಗೆ ಇಳಿಕೆ ನಿರೀಕ್ಷೆಯೂ ಹುಸಿಯಾಗಿದೆ. ಮೊದಲ ಬಾರಿ ಫ್ಲ್ಯಾಟ್ ಖರೀದಿಸುವವರಿಗೆ ಕೊಂಚ ತೆರಿಗೆ ರಿಲೀಫ್ ನೀಡಲಾಗಿದೆ. ಅಬಕಾರಿ ಸುಂಕ ಕೂಡ ಏರಿಕೆ ಆಗಿಲ್ಲ.
ಜಾತಿ-ಧರ್ಮಕ್ಕೆ ಆದ್ಯತೆ: ಒಕ್ಕಲಿಗ ಸಮುದಾಯದ ಬೇಡಿಕೆಯಂತೆ ಒಕ್ಕಲಿಗ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ, ಇದಕ್ಕಾಗಿ 500 ಕೋಟಿ ರೂ. ಅನುದಾನ ನೀಡುವ ಪ್ರಮುಖ ಘೋಷಣೆ ಹೊರಬಿದ್ದಿದೆ. ಇದರ ಜತೆಯಲ್ಲೇ ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿಗೆ 500 ಕೋಟಿ ರೂ., ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕಲ್ಯಾಣಕ್ಕೆ 50 ಕೋಟಿ ರೂ. ನೀಡಲಾಗಿದೆ. ಅಲ್ಪಸಂಖ್ಯಾತ ಸಮುದಾಯದ ಸಮಗ್ರ ಅಭಿವೃದ್ಧಿಗೆ 1500 ಕೋಟಿ ರೂ. , ಕ್ರೖೆಸ್ತ ಸಮುದಾಯಕ್ಕೆ 200 ಕೋಟಿ ರೂ. ಸಿಕ್ಕಿದೆ. ಆದಿಚುಂಚನಗಿರಿನಾಥ ಪಾರಂಪರಿಕ ಕೇಂದ್ರಕ್ಕೆ 10 ಕೋಟಿ ರೂ. ,ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ., ಬಸವನ ಬಾಗೇವಾಡಿಯಲ್ಲಿ ಜಗಜ್ಯೋತಿ ಬಸವಣ್ಣ ಜನ್ಮಸ್ಥಳ ಅಭಿವೃದ್ಧಿಗೆ 5 ಕೋಟಿ ರೂ., ಲಿಂಗೈಕ್ಯ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳ ಸ್ಮೃತಿವನಕ್ಕಾಗಿ 2 ಕೋಟಿ ರೂ. ಕೊಡಲಾಗಿದೆ.
ಕೃಷಿಗೆ ಭರ್ಜರಿ ಬೆಳೆ: ಕೃಷಿ, ತೋಟಗಾರಿಕೆ ವಲಯಕ್ಕೆ ಬಂಪರ್ ಅನುದಾನ ಸಿಕ್ಕಿದೆ. 7297 ಕೋಟಿ ರೂ. ಅನುದಾನ ಮೀಸಲಾಗಿದೆ. ನೀರಾವರಿ,ಮಾರುಕಟ್ಟೆ ವ್ಯವಸ್ಥೆ ಒದಗಿಸುವುದಕ್ಕೆ ಸರ್ಕಾರ ಹೆಚ್ಚು ಆದ್ಯತೆ ನೀಡಿದೆ.
ಮನೆ ಬಾಗಿಲಿಗೇ ಮಾಸಾಶನ: ಅಶಕ್ತರು, ವೃದ್ಧರು, ವಿಧವೆಯರು, ವಿಶೇಷ ಚೇತನರಿಗೆ ಸರ್ಕಾರದ ದತ್ತಾಂಶ ಆಧರಿಸಿ ಪಿಂಚಣಿ ನೀಡುವ ಮನೆ ಬಾಗಿಲಿಗೇ ಮಾಸಾಶನ ಅಭಿಯಾನಕ್ಕೆ ಚಾಲನೆ. ಮಹಿಳಾ ದಿನಕ್ಕೆ ಬಂಪರ್: ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಮಹಿಳೆಯರಿಗೆ ಭರ್ಜರಿ ಉಡುಗೊರೆ ಸಿಕ್ಕಿದೆ.
ಯಾರಿಗೂ ಒಂದು ರೂಪಾಯಿ ತೆರಿಗೆ ಹಾಕಿಲ್ಲ. ಯಾರಿಗೂ ಹೊರೆಯಾಗದ ಈ ಬಜೆಟ್ ಇತಿಹಾಸದಲ್ಲೇ ಮೊದಲು. | ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ