

ಬೆಂಗಳೂರು: ಕೆಲ ಬಿಜೆಪಿ ನಾಯಕರು ಬಹಿರಂಗವಾಗಿ ಪಕ್ಷಕ್ಕೆ ಮುಜುಗರ ತರುವಂತಹ ಹೇಳಿಕೆ ನೀಡುತ್ತಿರುವ ಹಿನ್ನೆಲೆ ಕ್ರಮ ಕೈಗೊಳ್ಳಲು ಪಕ್ಷದ ರಾಜ್ಯ ಶಿಸ್ತು ಸಮಿತಿ ಮುಂದಾಗಿದೆ. ಈ ಹಿನ್ನೆಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಶಾಸಕ ರೇಣುಕಾಚಾರ್ಯಗೆ ಬಹಿರಂಗ ಹೇಳಿಕೆ ನೀಡದಂತೆ ನೋಟಿಸ್ ನೀಡಿದೆ. ನೋಟಿಸ್ನಲ್ಲಿ ನಿಮ್ಮ ವಿರುದ್ಧ ಯಾಕೆ ಕ್ರಮಕೈಗೊಳ್ಳಬಾರದು ಎಂದು ಕಾರಣ ಕೊಡುವಂತೆ ಸೂಚನೆ ನೀಡಿದ್ದು, ನೋಟಿಸ್ಗೆ ಉತ್ತರಿಸಲು ಒಂದು ವಾರಗಳ ಕಾಲ ಸಮಯವನ್ನು ನೀಡಿದ್ದಾರೆ.
ಮಾಜಿ ಸಿಎಂ ಬೊಮ್ಮಾಯಿ ವಿರುದ್ಧ ಹೊಂದಾಣಿಕೆ ಆರೋಪ ಮಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಬಹಿರಂಗವಾಗಿ ಪಕ್ಷದ ಸಭೆಯಲ್ಲೇ ವಾಗ್ದಾಳಿ ನಡೆಸಿದ್ದರು. ಇತ್ತ ಮಾಜಿ ಸಚಿವ ರೇಣುಕಾಚಾರ್ಯ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿ ರಾಜೀನಾಮೆಗೆ ಆಗ್ರಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಆಡಳಿತದ 9 ವರ್ಷಗಳ ಸಾಧನೆ ಬಿಂಬಿಸುವ ಕಾರ್ಯಕರ್ತರ ಸಮಾವೇಶವನ್ನು ಶಾಸಕ ಯತ್ನಾಳ ಹಾಗೂ ನಿರಾಣಿ ವೈಯಕ್ತಿಕ ಟೀಕೆ ಟಿಪ್ಪಣೆಗಳಿಗೆ ವೇದಿಕೆಯಾಗಿಸಿಕೊಂಡಿದ್ದರು. ಪರಿಸ್ಥಿತಿ ಎಷ್ಟರ ಮಟ್ಟಿಗೆ ಮುಂದುವರಿಯಿತೆಂದರೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿಯೇ ದಾಂಧಲೆ ನಡೆದು ಕಾರ್ಯಕ್ರಮದ ಉದ್ಘಾಟನೆಯೇ ನೆರವೇರಿಸದೆ ಅಂತ್ಯಗೊಳಿಸಬೇಕಾಯಿತು. ಅಷ್ಟಕ್ಕೆ ಈ ಸಮರ ನಿಲ್ಲಲಿಲ್ಲ. ಮರುದಿನವೂ ಮಾಜಿ ಸಚಿವ ಮುರುಗೇಶ ನಿರಾಣಿ ಸುದ್ದಿಗೋಷ್ಠಿ ನಡೆಸಿ ಖಡಕ್ ಸಂದೇಶ ರವಾನಿಸಿದರು. ಪರಿಸ್ಥಿತಿ ಕೈಮೀರುವ ಹಂತವನ್ನು ಅರಿತ ಹೈಕಮಾಂಡ್ ಉಭಯ ನಾಯಕರಿಗೆ ರಾಜಧಾನಿಗೆ ಬರುವಂತೆ ಸಂದೇಶ ರವಾನಿಸಿದೆ ಎಂದು ಮುಖಂಡರೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಬಿಜೆಪಿ ರಾಜ್ಯದ ಅಧ್ಯಕ್ಷರಿಗೆ ವಿನಂತಿ ಮಾಡುತ್ತೇನೆ, ನಿಮ್ಮ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದೆ. ತಾವು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಮೋದಿಜಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಾವೆಲ್ಲ ಪಕ್ಷದ ನಾಯಕರು ಕಾರ್ಯಕರ್ತರನ್ನು ಜೋಡಣೆ ಮಾಡಬೇಕು. ಬಿಜೆಪಿ ಪಕ್ಷವನ್ನು ಹಗಲಿರುಳು ದುಡಿದು ಪಕ್ಷ ಕಟ್ಟಿದವರು ಬಿ.ಎಸ್. ಯಡಿಯೂರಪ್ಪ, ಅನಂತ ಕುಮಾರ ಹೆಗಡೆ, ಕೆ.ಎಸ್. ಈಶ್ವರಪ್ಪ, ಜಗದೀಶ ಶೆಟ್ಟರ್ ಮುಂತಾದವರು’ ಎನ್ನುತ್ತಾ ನಳಿನ್ ಕುಮಾರ್ ಕಟೀಲ್ ವಿರುದ್ಧ ರೇಣುಕಅಚಾರ್ಯ ವಾಗ್ದಾಳಿ ನಡೆಸಿದ್ದರು.