

ಬೆಂಗಳೂರು: ಮಾರ್ಚ್ 4 ರಿಂದ ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನದ ಹಿನ್ನೆಲೆಯಲ್ಲಿ ಸುಗಮವಾಗಿ ಕಲಾಪ ನಡೆಸಲು ಸಭಾಪತಿ ಬಸವರಾಜ ಹೊರಟ್ಟಿ ಅವರು ಪೂರ್ವಭಾವಿ ಸಭೆ ನಡೆಸಿದರು.
ಮೂರು ಪಕ್ಷದ ನಾಯಕರು, ಮುಖ್ಯಸಚೇತಕರ ಜೊತೆ ಸಭಾಪತಿ ಬಸವರಾಜ ಹೊರಟ್ಟಿ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಹೊರಟ್ಟಿ, ನಾಳೆಯಿಂದ ಆರಂಭ ಆಗಲಿರುವ ಸದನ ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ವಿರೋಧ ಪಕ್ಷಗಳ ಮುಖಂಡರು, ಸಭಾನಾಯಕರು, ಮುಖ್ಯಸಚೇತಕರ ಜೊತೆ ಚರ್ಚೆ ನಡೆಸಿದ್ದೇನೆ ಎಂದರು.
ಸದನದಲ್ಲಿ ಸದಸ್ಯರ ನಡವಳಿಕೆ, ವರ್ತನೆ ಹೇಗಿರಬೇಕು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಅಜೆಂಡಾದಲ್ಲಿ ಇರುವ ವಿಚಾರಗಳು ಅವತ್ತೇ ಮುಗಿಸಬೇಕು. ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸುವ ವಿಷಯಕ್ಕೆ ಕನಿಷ್ಠ ಎರಡು ದಿನಗಳಲ್ಲಿ ಸರ್ಕಾರ ಉತ್ತರ ಕೊಡಬೇಕು ಎಂಬ ನಿಟ್ಟಿನಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಮುಖಂಡರ ಜೊತೆ ಚರ್ಚೆ ನಡೆಸಲಾಯಿತು. ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸದನ ನಡೆಸುವ ನಿರ್ಧಾರ ಮಾಡಲಾಗಿದೆ ಎಂದರು.
ವಿಧಾನಪರಿಷತ್ ನಲ್ಲಿ ಬಿಲ್ ಗಳ ಬಗ್ಗೆ ಚರ್ಚೆ ಆಗಬೇಕು, ಇದರಿಂದ ಸರ್ಕಾರಕ್ಕೆ ಸೂಕ್ತ ಸಮಯದಲ್ಲಿ ಸೂಚನೆಗಳನ್ನು ನೀಡಬಹುದು. ಹಿಂದೆ ನಡೆದ ಘಟನಾವಳಿಗಳು ಮರುಕಳಿಸದಂತೆ ಮುಖಂಡರ ಜೊತೆ ಚರ್ಚೆ ಮಾಡಲಾಯಿತು. ಪ್ರಶ್ನೋತ್ತರ ಅವಧಿ ಸೂಕ್ತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.